ಸೋಮವಾರಪೇಟೆ ಜ.25 : ಶಾಲೆಗೆ ಕಾಲ್ನಡಿಗೆಯಲ್ಲಿ ಬರಲು ಕಾಡಾನೆಗಳ ಭಯವಿದೆ. ಇನ್ನಾದರೂ ಸರ್ಕಾರಿ ಬಸ್ ಕಲ್ಪಿಸಿಕೊಡಬೇಕೆಂದು ಯಡವಾರೆ ಶಾಲೆಯ ವಿದ್ಯಾರ್ಥಿಗಳು ಬೇಡಿಕೆಯಿಟ್ಟರು.
ಐಗೂರು ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ನಾವು ಪ್ರತಿಷ್ಠಾನ ವತಿಯಿಂದ ಕಾಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಯಡವಾರೆ, ಸಜ್ಜಳ್ಳಿ ಭಾಗದಿಂದ 9 ಕಿ.ಮೀ. ಕಾಲ್ನಡಿಗೆಯಲ್ಲಿ ಬರಬೇಕು. ರಸ್ತೆ ಹೊಂದಿಕೊಂಡಂತೆ ಕಾಜೂರು ಮೀಸಲು ಅರಣ್ಯವಿದೆ. ನಾವು ಪ್ರತಿದಿನ ಕಾಡಾನೆಗಳಿಗೆ ಹೆದರಿಕೊಂಡು ಶಾಲೆಗೆ ಬರಬೇಕು. ಶಾಲೆ ಸಮಯಕ್ಕೆ ಗ್ರಾಮೀಣಸಾರಿಗೆ ಬಸ್ ಕೊಡಿಸಬೇಕು ಎಂದು ವಿದ್ಯಾರ್ಥಿ ರೂಪ, ಸಹನಜ್ಯೋತಿ, ಸಹನ ಮನವಿ ಮಾಡಿಕೊಂಡರು.
ಮಳೆಗಾಲದಲ್ಲಿ ನಡೆದುಕೊಂಡು ಶಾಲೆಗೆ ತಲುಪಿದಾಗ ಬಟ್ಟೆ ಒದ್ದೆಯಾಗಿರುತ್ತದೆ. ದಿನವಿಡಿ ಚಳಿಯಿಂದ ನಡುಗುತ್ತ ಪಾಠ ಕೇಳಬೇಕು. ಸರ್ಕಾರ ಬಸ್ ಸೌಲಭ್ಯ ಒದಗಿಸಿಕೊಡಬೇಕು ಎಂದರು.
ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಅರಿವಿದೆ. ಶಾಸಕ ಡಾ.ಮಂತರ್‍ಗೌಡ ಅವರಿಗೆ ಮನವಿ ಮಾಡುವುದಾಗಿ ಪಂಚಾಯ್ತಿ ಅಧ್ಯಕ್ಷ ವಿನೋದ್ ಭರವಸೆ ನೀಡಿದರು.
ಯಡವನಾಡು ಪ್ರಾಥಮಿಕ ಶಾಲೆ ಆವರಣದಲ್ಲಿ ತಡೆಗೋಡೆಯಿಲ್ಲ. ಗೂಳಿಗಳು ರಸ್ತೆ, ಮೈದಾನದಲ್ಲಿ ಗುದ್ದಾಡುತ್ತಿರುತ್ತವೆ. ನಮಗೆ ರಸ್ತೆಯಲ್ಲಿ ನಡೆದುಕೊಂಡು ಬರಲು ಭಯವಾಗುತ್ತಿದೆ. ಶಾಲಾ ಆವರಣಕ್ಕೆ ಭದ್ರವಾದ ಬೇಲಿ ಅಥಾವ ಕಾಂಪೌಂಡ್ ನಿರ್ಮಿಸಿಕೊಡಿ ಎಂದು ಅಭಿಲಾಷ್ ಬೇಡಿಕೆ ಇಟ್ಟರು.
ಐಗೂರು, ಯಡವನಾಡು, ಯಡವಾರೆ ವ್ಯಾಪ್ತಿಯಲ್ಲಿ 100ಕ್ಕಿಂತ ಹೆಚ್ಚು ಕಾಡುದನಗಳಿವೆ. ಕೃಷಿ ಫಸಲು ಹಾನಿ ಮಾಡುತ್ತಿವೆ. ನಿಯಂತ್ರಣ ಕಷ್ಟವಾಗುತ್ತಿದೆ. ಅರಣ್ಯ ಇಲಾಖೆ, ಪಶುವೈದ್ಯಕೀಯ, ಪೊಲೀಸ್ ಇಲಾಖೆ ಇವರುಗಳು ಮನವಿ ಪತ್ರ ಸಲ್ಲಿಸಿದವರು. ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಗ್ರಾಪಂ ಸದಸ್ಯರಾದ ಲಿಂಗೇರಿ ರಾಜೇಶ್, ಬಾರನಾ ಪ್ರಮೋದ್ ಸಲಹೆ ನೀಡಿದರು.
ಐಗೂರು ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜಿಗೆ ಹೆಚ್ಚುವರಿ ಶೌಚಲಯ ಬೇಕೆಂದು ವಿದ್ಯಾರ್ಥಿಗಳು ಬೇಡಿಕೆಯಿಟ್ಟರು. ಶಾಲೆಯ ಪಕ್ಕದಲ್ಲಿ ಮೀಸಲು ಅರಣ್ಯವಿರುವುದರಿಂದ ಕೀಟಗಳ ಬಾದೆ ಹೆಚ್ಚಿದ್ದು,
ಶಾಲೆಯ ಸುತ್ತಲು ಕೀಮಿನಾಶಕ ಸಿಂಪಡಿಸಬೇಕು ಎಂದು ಮನವಿ ಮಾಡಿದರು. ಕೂಡಲೆ ಕ್ರಿಮಿನಾಶಕ ಸಿಂಪಡಿಸುತ್ತೇವೆ ಎಂದು ಅಧ್ಯಕ್ಷರು ಭರವಸೆ ನೀಡಿದರು.
ಕಾಜೂರು ಶಾಲೆಗೆ ಕಾಂಪೌಂಡ್, ಗರಂದೂರು ಶಾಲೆಗೆ ಇಂಗುಗುಂಡಿ, ರಸ್ತೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳಾದ ಧನ್ವಿತ್, ಸುದೀಪ್ ಮನವಿ ಮಾಡಿದರು. ಪಂಚಾಯಿತಿ ವ್ಯಾಪ್ತಿಯ ಶಾಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ. ಒಂದಷ್ಟು ಕೆಲಸವನ್ನು ನರೇಗಾದಲ್ಲಿ ಮಾಡಿಕೊಡಲು ಕ್ರೀಯಾಯೋಜನೆ ಮಾಡಿಕೊಳ್ಳಲಾಗಿದೆ. ಬಾಕಿಯಿರುವ ಕಾಂಪೌಂಡ್ ಕಾಮಗಾರಿ ಮಾಡಿಕೊಡಲಾಗುವುದು ಎಂದು ಪಿಡಿಒ ಬಾಲಕೃಷ್ಣ ಭರವಸೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಬಿಇಒ ಭಾಗ್ಯಮ್ಮ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಧೈರ್ಯವಾಗಿ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಉಪಯೋಗಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ, ಸಾಮಾಜಿಕ ಭದ್ರತೆಯನ್ನು ಕಲ್ಪಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಾವು ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಪ್ರತಿಷ್ಠಾನದ ಕಾರ್ಯಕಾರಣಿ ನಿರ್ದೆಶಕಿ ಸುಮನಾ ಗೌತಮ್, ಪಂಚಾಯಿತಿ ಸದಸ್ಯರುಗಳು, ಶಿಕ್ಷಕರು, ಅರೋಗ್ಯ, ಆಶಾ ಕಾರ್ಯಕರ್ತೆಯರು ಇದ್ದರು.









