ಮಡಿಕೇರಿ ಜ.26 NEWS DESK : ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಬೇಕು ಮತ್ತು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಮಡಿಕೇರಿ ನಗರಸಭಾ ಸದಸ್ಯ ಎಂ.ಕೆ.ಮನ್ಸೂರ್ ಆಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮಡಿಕೇರಿಗೆ ಮುಖ್ಯಮಂತ್ರಿಗಳು ಆಗಮಿಸಿದ್ದ ಸಂದರ್ಭ ಭೇಟಿಯಾದ ಮನ್ಸೂರ್ ಆಲಿ, ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸುಮಾರು 1800 ನಿವೇಶನ ರಹಿತರ ಅರ್ಜಿಗಳು ಬಾಕಿ ಉಳಿದಿವೆ ಎಂದರು.
ಅರ್ಜಿ ಸಲ್ಲಿಸಿದವರು ಕಡುಬಡವರಾಗಿದ್ದು, ಇವರುಗಳಿಗೆ ನಗರಸಭಾ ವ್ಯಾಪ್ತಿಯಲ್ಲಿ ಜಾಗ ಮಂಜೂರು ಮಾಡಿ ಮನೆ ನಿರ್ಮಿಸಿಕೊಡಬೇಕು. ಅಲ್ಲದೆ ಪಡಿತರ ಚೀಟಿಯಲ್ಲಿ ತುಂಬಾ ಗೊಂದಲಗಳಿದ್ದು, ಸರ್ಕಾರದಿಂದ ತಕ್ಷಣ ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.









