ಮಡಿಕೇರಿ ಜ.26 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸರ್ಕಾರದ ಮುಂದಿಟ್ಟಿರುವ ಕೊಡವ ಲ್ಯಾಂಡ್ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ “ಕೊಡಗು ಸೌಹಾರ್ದ ನಾಗರಿಕ ವೇದಿಕೆ” ಕೊಡಗಿನ ಬಹುಸಂಖ್ಯಾತ ಜನರ ಹಿತರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಮುಖ್ಯಮಂತ್ರಿಗಳು ಮಡಿಕೇರಿಗೆ ಭೇಟಿ ನೀಡಿದ ಸಂದರ್ಭ ನಾಗರಿಕ ವೇದಿಕೆಯ ಸಂಚಾಲಕ ಎಸ್.ಎಂ.ಚಂಗಪ್ಪ ಮತ್ತಿತರರು ಕೊಡವ ಲ್ಯಾಂಡ್ ರಚನೆಗೆ ಅವಕಾಶ ನೀಡಬಾರದು ಮತ್ತು ಈ ಕುರಿತು ಸರ್ಕಾರ ಕಾನೂನು ಹೋರಾಟ ನಡೆಸಬೇಕೆಂದು ಕೋರಿದರು.
ಕ್ರಿ.ಶ.1956ರ ಹಿಂದೆ ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ “ಸಿ” ರಾಜ್ಯವಾಗಿದ್ದ ಕೊಡಗು, ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭ ಮೈಸೂರು ರಾಜ್ಯ ರೂಪುಗೊಂಡಾಗ ಅದರ ಅವಿಭಾಜ್ಯ ಅಂಗವಾಗಿತ್ತು, ಈಗ ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಒಂದಾಗಿದೆ.
ಕರ್ನಾಟಕದೊಳಗೆ ತನ್ನ ಸಾಂಸ್ಕೃತಿಕ ಬಹುತ್ವದ ಅನನ್ಯತೆಯನ್ನು ಹೊಂದಿರುವ ಕೊಡಗು ಜಿಲ್ಲೆಯ ಎಲ್ಲಾ ವರ್ಗದ ಜನರು ಅನ್ಯೋನತೆಯಿಂದ ಬಾಳುತ್ತಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಅನೇಕ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬಂದಿವೆ. ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ, ಹಾಗೆಯೇ ಅರೆಭಾಷೆಯ ಭಾಷಾ ಸಾಹಿತ್ಯದ ಅಭ್ಯುದಯಕ್ಕೆ ಎರಡು ಪ್ರತ್ಯೇಕ ಭಾಷಾ ಅಕಾಡೆಮಿಗಳನ್ನು ರಚಿಸಲಾಗಿದೆ. ಈ ಅಕಾಡೆಮಿಗಳ ಮೂಲಕ ಕೊಡಗಿನ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಸರ್ಕಾರಗಳು ಹೆಚ್ಚಿನ ಮುತುವರ್ಜಿಯನ್ನು ವಹಿಸಿವೆ. ಅಲ್ಲದೆ ಸದೃಢವಾಗಿರುವ ಕೊಡವ ಜನಾಂಗದ ಅಭಿವೃದ್ಧಿಗಾಗಿ ಅಪಾರ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ.
ಕೊಡಗು ಜಿಲ್ಲೆಯ “ಕೊಡವ ನ್ಯಾಷನಲ್ ಕೌನ್ಸಿಲ್” (ಸಿಎನ್‍ಸಿ) ಎಂಬ ಸಂಘಟನೆಯೊಂದು “ಕೊಡವ ಲ್ಯಾಂಡ್” ಸ್ಥಾಪನೆಯ ಆಗ್ರಹದೊಂದಿಗೆ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಆ ಹೋರಾಟಕ್ಕೆ ಒಂದಷ್ಟು ಜನ ಬೆಂಬಲಿಸುತ್ತಿರುವುದು ಬಿಟ್ಟರೆ ಜಿಲ್ಲೆಯಲ್ಲಿರುವ ವಿವಿಧ ಜನಾಂಗಗಳು ಜನವಿರೋಧಿ ಕೋರಿಕೆಯನ್ನು ವಿರೋಧಿಸುತ್ತಾ ಬಂದಿದ್ದಾರೆ.
ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವ ಸಮುದಾಯದ ಜನರ ಪರವಾಗಿ ತನ್ನ ಹೋರಾಟ ಎಂಬ ಹೊಸ ವಾದವನ್ನು ಮುಂದಿಟ್ಟು, ಕೊಡವರು ಬುಡಕಟ್ಟು ಜಾತಿಗೆ ಸೇರಿದವರು ಅವರಿಗೆ ಎಸ್.ಟಿ. ಟ್ಯಾಗ್ ಸಿಗಬೇಕು ಎಂಬುದಾಗಿ ತನ್ನ ಸಮುದಾಯದವರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯ ಬೇಡಿಕೆಯನ್ನೂ ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದು, ಕೊಡಗಿನ ಇತರ ಸಮುದಾಯದ ಜನ ಆತಂಕಗೊಂಡಿದ್ದಾರೆ.
ಹಿರಿಯ ವಕೀಲ ಡಾ.ಸುಬ್ರಮಣಿಯಂ ಸ್ವಾಮಿ ಅವರು ಸಿಎನ್‍ಸಿ ಬೇಡಿಕೆ ಪರ ಕೋರ್ಟ್‍ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಒಂದು ವೇಳೆ ಕೊಡವ ಲ್ಯಾಂಡ್ ರಚನೆಯಾದಲ್ಲಿ ಈ ತಾರತಮ್ಯವು ಭಾರತದ ರಾಜ್ಯಾಂಗದ ಪ್ರಕಾರ ಭಾರತೀಯರೆಲ್ಲರೂ ಒಂದೇ ಎಂಬ ಉದಾತ್ತ ನಿಯಮದ ಉಲ್ಲಂಘನೆಯಾಗುತ್ತದೆ. ಭಾರತೀಯರು ದೇಶದ ಯಾವುದೇ ಭಾಗದಲ್ಲಿ ತಮ್ಮ ಬದುಕು ಕಂಡುಕೊಳ್ಳುವುದನ್ನು ಇದು ಪ್ರತಿರೋಧಿಸುತ್ತದೆ. ಕೊಡಗಿನ ಕೊಡವೇತರ ಜನರನ್ನು ಪ್ರತ್ಯೇಕಗೊಳಿಸಿ ಅವರನ್ನು ಎರಡನೆಯ ದರ್ಜೆಯ ಸ್ಥಾನಮಾನಕ್ಕೆ ಇಳಿಸುವುದು ಈ ಬೇಡಿಕೆಯ ಹಿಂದಿರುವ ಹುನ್ನಾರವಾಗಿದೆ. ಇದರಿಂದ ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿ ಕೊಡಗಿನಲ್ಲಿ ಆಂತರಿಕ ಕಲಹ ಉದ್ಭವಿಸುವ ಸಾಧ್ಯತೆ ಅಧಿಕವಾಗಿದೆ ಎಂದು ನಾಗರಿಕ ವೇದಿಕೆ ಆರೋಪಿಸಿದೆ.
ಈ ಎಲ್ಲಾ ಕಾರಣಗಳಿಗಾಗಿ ಇತರ ಕೊಡವ ಭಾಷಿಕರಲ್ಲಿ ಹೆಗ್ಗಡೆ, ಐರಿ, ಕೆಂಬಟ್ಟಿ, ಪೂಮಲೆ ಕುಡಿಯ, ಬಣ್ಣ, ಮಲೆಯ, ಬೂಣೆಪಟ್ಟಮ್ಮ, ಕಣಿಯ, ಕಾಪಾಳ, ಅಮ್ಮ ಕೊಡವ, ಮೇದ, ಗೊಲ್ಲ, ಕೊಡವ ನಾಯರ್, ಕೋಯವ ಮೊದಲಾದ ಜನಸಮುದಾಯ ಸಿ.ಎನ್.ಸಿ. ಬೇಡಿಕೆಯ ವಿರುದ್ಧ ಇದ್ದಾರೆ.
ಕೊಡಗಿನ ಕಾಡಿನ ನಡುವೆ ಹಾಡಿಗಳಲ್ಲಿ, ಗುಡಿಸಲುಗಳಲ್ಲಿ ಮತ್ತು ಕಾಫಿ ತೋಟದ ಲೈನ್ ಮನೆಗಳಲ್ಲಿ ಬದುಕು ಸವೆಸುತ್ತಿರುವ ಆರ್ಥಿಕವಾಗಿ ಅತ್ಯಂತ ಬಡವರಾಗಿರುವ ಹಾಗೂ ಕೃಷಿಭೂಮಿಯಾಗಲಿ, ಸ್ವಂತ ಸೂರಾಗಲಿ ಇಲ್ಲದ ಮಂದಿಯಲ್ಲಿ ಸಿಎನ್‍ಸಿ ಬೇಡಿಕೆ ಆತಂಕ ಸೃಷ್ಟಿಸಿದೆ
ನೈಜ ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಇದರಿಂದ ಕಡಿಮೆಗೊಳ್ಳುತ್ತದೆ. ಈ ಅನ್ಯಾಯವನ್ನು ಕಾನೂನಾತ್ಮಕವಾಗಿ ಪ್ರತಿರೋಧಿಸುವ ಉದ್ದೇಶದಿಂದ ಹೆಗ್ಗಡೆ, ಐರಿ, ಕೆಂಬಟ್ಟಿ, ಪೂಮಲೆ ಕುಡಿಯ, ಮೊದಲಾದ ಕೊಡವ ಭಾಷಿಕ ಸಮದಾಯ, ಲಿಂಗಾಯಿತ, ಒಕ್ಕಲಿಗ, ಬಿಳಿಮಗ್ಗ-ದೇವಾಂಗ, ಅರೆಭಾಷೆ ಗೌಡ, ಕೊಡವ ಮುಸ್ಲಿಮ್, ದಲಿತರು, ಬೋವಿ, ಆದಿ ಕರ್ನಾಟಕ, ಆದಿ ದ್ರಾವಿಡ, ಜೇನು ಕುರುಬ, ಮರಾಠ, ವಿಶ್ವಕರ್ಮ, ನಯನ ಕ್ಷತ್ರಿಯ, ನಾಮಧಾರಿ, ಬ್ರಾಹ್ಮಣ, ಬಿಲ್ಲವ, ತೀಯರ್, ನಾಯರ್, ಮೊಗೇರ, ಫಣಿ ಯರವ ಮತ್ತು ಪಂಜರಿ ಯರವ ಮುಂತಾದ ಸಮುದಾಯಗಳಿಗೆ ಸೇರಿದ ನಾವುಗಳು “ಕೊಡಗು ಸೌಹಾರ್ದ ನಾಗರಿಕ ವೇದಿಕೆ” ಮೂಲಕ ಮನವಿ ಸಲ್ಲಿಸುತ್ತಿರುವುದಾಗಿ ಮುಖ್ಯಮಂತ್ರಿಗಳ ಬಳಿ ವಿವರಿಸಿದರು.
ಸರಕಾರದ ಪರವಾಗಿ ಕೋರ್ಟ್ ನಲ್ಲಿ ಸಮಯೋಚಿತ ಮತ್ತು ಸೂಕ್ತ ಪ್ರತಿಪಾದನೆ ಮಾಡಲು ಕಾನೂನು ಇಲಾಖಾಧಿಕಾರಿಗಳಿಗೆ ಸೂಚಿಸಿ ಕೊಡಗಿನ ಬಹುಸಂಖ್ಯಾತ ಜನರ ಹಿತರಕ್ಷಣೆ ಮಾಡಬೇಕೆಂದು ಎಸ್.ಎಂ.ಚಂಗಪ್ಪ ಮನವಿ ಮಾಡಿದರು.









