ಮಡಿಕೇರಿ ಜ.26 NEWS DESK : ಬಹುನಿರೀಕ್ಷಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡಗು ಭೇಟಿ ನಿರಾಶೆ ಮೂಡಿಸಿದೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಯಾವುದೇ ಪರಿಹಾರದ ಭರವಸೆ ದೊರೆತ್ತಿಲ್ಲವೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಕೊಡಗು ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ಮಾಡಿದ ಸಿದ್ದರಾಮಯ್ಯ ಅವರ ಬಗ್ಗೆ ಜನರಲ್ಲಿ ಹಲವು ನಿರೀಕ್ಷೆಗಳಿದ್ದವು. ಕಳೆದ ಹಲವು ವರ್ಷಗಳಿಂದ ಕೊಡಗನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರದ ಭರವಸೆ ದೊರೆತ್ತಿಲ್ಲ. ಅಲ್ಲದೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ತಮ್ಮ ಸಂಪುಟದ ಸಚಿವರ ಜೊತೆಗೆ ಆಗಮಿಸಿದ ಮುಖ್ಯಮಂತ್ರಿಗಳು ಇದೊಂದು ಪ್ರವಾಸಿ ಭೇಟಿ ಎಂಬಂತೆ ನಡೆದುಕೊಂಡಿದ್ದಾರೆ, ಕೇವಲ ಮನೋರಂಜನಾ ಭಾಷಣ ಮಾಡಿ ಹೋಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಶಾಲೆಗಳು ಮುಚ್ಚಿವೆ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ಚಿಕಿತ್ಸೆಗಾಗಿ ಅಕ್ಕಪಕ್ಕದ ಜಿಲ್ಲೆಗೆ ಹೋಗಬೇಕಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿವೆ, ಇದನ್ನು ತುಂಬುವ ಕೆಲಸ ಆಗುತ್ತಿಲ್ಲ.
ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ, ಕಳೆದ ವರ್ಷದ ಬರ ಪರಿಹಾರಕ್ಕೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಕಾರ್ಮಿಕರ ಕೊರತೆಯಿಂದ ಜಿಲ್ಲೆಯ ಬೆಳೆಗಾರರು ಕಾಫಿ ಕೊಯ್ಯಲಾಗದೆ ಸಂಕಷ್ಟದಲ್ಲಿದ್ದಾರೆ. ಒಂದು ಕಡೆ ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ಇದೆ, ಮತ್ತೊಂದೆಡೆ ತೋಟ ಕೆಲಸಕ್ಕೆ ಕೆಲಸಗಾರರು ಸಿಗುತ್ತಿಲ್ಲ, ಇದರಿಂದ ಕಾಫಿ ಉದ್ಯಮಿಗಳು ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ನೀತಿ ಸಡಿಲಗೊಳಿಸಲು ಮುಂದಾಗಬೇಕಾಗಿತ್ತು ಎಂದು ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರೂ ಕಂದಾಯ ಇಲಾಖೆಯಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ರೈತರ ಪಹಣಿ ಸರಿಪಡಿಸುವುದು, ಪೌತಿ ಖಾತೆ ತಿದ್ದುಪಡಿ ಕಂದಾಯ ನಿಗಧಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಜಿಲ್ಲೆಯ ಅನೇಕ ಭಾಗಗಳಲ್ಲಿ ಭತ್ತದ ಗದ್ದೆಗಳು ಪಾಳು ಬಿದ್ದಿವೆ, ಭತ್ತ ಬೆಳೆಯಲು ಸರ್ಕಾರ ರೈತರಿಗೆ ಯಾವುದೇ ಪ್ರೋತ್ಸಾಹ ಧನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ರೂ.350 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿ ಹೋಗಿದ್ದಾರೆ. ಈ ಕಾಮಗಾರಿಗಳಿಗೆ ಯಾವ ಇಲಾಖೆಯಿಂದ ಹಣ ಬಿಡುಗಡೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಬೇಕು. ಜಿಲ್ಲೆಗೆ ಆಗಮಿಸಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಘೋಷಣೆಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿರುವ ಭೋಜಣ್ಣ ಸೋಮಯ್ಯ, ಹಿಂದಿನ ಅವಧಿಯಲ್ಲಿ ಬಹಳಷ್ಟು ಕಾಮಗಾರಿಗಳು ಶಂಕುಸ್ಥಾಪನೆಯಾಗಿ ಪೂರ್ಣಗೊಳ್ಳದ ನಿದರ್ಶನಗಳಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









