ಸೋಮವಾರಪೇಟೆ,ಜ.27 NEWS DESK : ದೇಶದ ಹಾಕಿ ಕ್ಷೇತ್ರಕ್ಕೆ ಕೊಡಗು ಜಿಲ್ಲೆ ಅನೇಕ ಕ್ರೀಡಾಪಟುಗಳನ್ನು ನೀಡಿದ್ದು, ಇದೀಗ ಜಿಲ್ಲೆಯ ಹಾಕಿ ಯುವ ಕ್ರೀಡಾಪಟು ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್‍ಗೆ ಆಯ್ಕೆಯಾಗುವ ಮೂಲಕ ಹಾಕಿ ಕ್ಷೇತ್ರದಲ್ಲಿ ಭರವಸೆ ಮೂಡಿಸಿದ್ದಾರೆ.
ಸೋಮವಾರಪೇಟೆಯ ಕ್ಲಬ್‍ರಸ್ತೆ ನಿವಾಸಿ ಹೆಚ್.ಎನ್.ಅಶೋಕ್ ಹಾಗೂ ಹೆಚ್.ಎ. ಸುಜಿನಿ ದಂಪತಿಯ ಪುತ್ರ, ಹೆಚ್.ಎ. ವಚನ್, ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪಸ್ ಕೋರ್ ಗ್ರೂಪ್‍ಗೆ ಆಯ್ಕೆಯಾಗಿರುವ ಕ್ರೀಡಾಪಟು.
ಪಟ್ಟಣದ ಓಎಲ್‍ವಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ವಚನ್, ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯಲ್ಲಿದ್ದುಕೊಂಡು ಸೆಂಟ್ ಅಂತೋಣಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಡಿವೈಇಎಸ್ ಕ್ರೀಡಾ ಹಾಸ್ಟೆಲ್‍ನಲ್ಲಿದ್ದು ಜೈನ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
2019-20, 2021-2023ರವರೆಗೆ ಹಾಕಿ ಇಂಡಿಯಾದಿಂದ ಆಯೋಜನೆಗೊಂಡಿದ್ದ ಜೂನಿಯರ್ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗಿಯಾಗಿರುವ ವಚನ್, ರಾಜ್ಯಮಟ್ಟದ ಅನೇಕ ಪಂದ್ಯಾವಳಿಯಲ್ಲಿ ಆಡಿದ್ದಾರೆ.









