ಮಡಿಕೇರಿ ಫೆ.5 NEWS DESK : ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಆಂದೋಲನದ ಮಾದರಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಜಮ್ಮಾಬಾಣೆ ಸಮಸ್ಯೆ ಬಗೆಹರಿಯದೇ ನಾಲ್ಕಾರು ವರ್ಷಗಳಿಂದ ಹಾಗೇ ಉಳಿದಿದೆ. ಈ ಬಗ್ಗೆ ಜಿಲ್ಲೆಯ ಶಾಸಕದ್ವಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾಧಿಕಾರಿ ಅವರು ತಮ್ಮ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಮ್ಮಾಬಾಣೆ ಸಮಸ್ಯೆ ಬಗೆಹರಿಕೆಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಯಾವ ಊರಿನಲ್ಲಿ ಜಮ್ಮಾಬಾಣೆ ಸಮಸ್ಯೆ ಇದೆಯೋ ಅಂತಹ ಊರುಗಳಲ್ಲಿ ತಹಶೀಲ್ದಾರ್ ಸೇರಿದಂತೆ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಗ್ರಾಮಸಭೆ ನಡೆಸುವ ಮೂಲಕ ತಕರಾರಿಲ್ಲದ ಕಡೆ ಸರ್ವೆ ನಡೆಸಿ ಯಾರು ಜಾಗ ಸಾಗುವಳಿ ಮಾಡುತ್ತಿದ್ದಾರೋ ಅಂತಹವರ ಹೆಸರಿಗೆ ಪ್ರತ್ಯೇಕವಾದ ಹಿಸ್ಸಾ ಪಹಣಿ ಮಾಡಿಕೊಡಬೇಕು. ತಕರಾರು ಇದ್ದ ಕಡೆಗಳಲ್ಲಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ಈ ಕಾರ್ಯ ಆಂದೋಲನ ಮಾದರಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಾಫಿ ತೋಟಗಳ ಪಕ್ಕದಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ಕೃಷಿ ನಡೆಸುತ್ತಿರುವ ತೋಟದ ಮಾಲೀಕರಿಗೆ ಆ ಜಾಗವನ್ನು ಭೋಗ್ಯಕ್ಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಸಹಮತವಿದೆ. ಆದಷ್ಟು ಶೀಘ್ರ ಮುಖ್ಯಮಂತ್ರಿಗಳ ಹಂತದಲ್ಲಿ ಸಭೆ ನಡೆಸಿ ಸರಕಾರದ ನಿಲುವು ಪ್ರಕಟಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪೈಕಿ ಆರ್‌ಟಿಸಿ ಸರಕಾರದ ವತಿಯಿಂದ ದುರಸ್ತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ 4 ತಿಂಗಳಲ್ಲಿ 120 ಬಗರ್‌ಹುಕುಂ ಕಮಿಟಿ ಹಾಗೂ 60 ಲ್ಯಾಂಡ್ ಟ್ರಿಬ್ಯೂನಲ್ ಕಮಿಟಿ ರಚಿಸಲಾಗಿದೆ ಎಂದರು. ಗೋಮಾಳಕ್ಕೆ ಸಂಬಂಧಿಸಿದಂತೆ ಜಾನುವಾರುಗಳ ಸಮೀಕ್ಷೆ ನಡೆಸಿ, ಅದರ ಆಧಾರದಲ್ಲಿ ಎಷ್ಟು ಜಾಗ ಬೇಕೋ ಅಷ್ಟನ್ನು ಕಾಯ್ದಿರಿಸಿ, ಉಳಿಕೆ ಜಾಗವಿದ್ದಲ್ಲಿ ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ ಬಳಿಕ ಆ ಜಾಗವನ್ನು ಸಾಗುವಳಿ ಚೀಟಿ ನೀಡಲು ಪರಿಗಣಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜ ಹಾಗೂ ಕಂದಾಯ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.










