ಬೆಂಗಳೂರು ಫೆ.6 : ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ, ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗೆ ನಡೆಸಿದ ಪ್ರಯೋಗಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಿದರು.
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತ 9 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳು, ಸ್ಮರಣಿಕೆ ಹಾಗೂ ಗಾಂಧೀಜಿ ಅವರ ಜೀವ ಸಂದೇಶಗಳ ಕುರಿತು ಪುಸ್ತಕಗಳನ್ನು ವಿತರಿಸಿ ಶುಭಕೋರಿದರು.
ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವಿಧ್ಯಾರ್ಥಿ ಅನಿರುದ್ದ ಮನೋಜ್ ಮತ್ತು ಮಡಿಕೇರಿಯ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನ ಕೆ.ಎಸ್.ಹೃತ್ಪೂರ್ವಕ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ಮುಖ್ಯಮಂತ್ರಿ ಅವರಿಂದ ಬಹುಮಾನ ಪಡೆದಿರುವುದು ವಿಶೇಷ.
ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರಬಂಧಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಸ್ಥಾನ-31,000, ದ್ವಿತೀಯ-21,000 ಹಾಗೂ ತೃತೀಯ-11,000 ರೂ.ಗಳ ನಗದು ಪುರಸ್ಕಾರ ನೀಡಲಾಯಿತು.
ವಿಜೇತರ ವಿವರ: ಪ್ರೌಢಶಾಲೆ ವಿಭಾಗದಲ್ಲಿ ಪ್ರಥಮ-ಅನಿರುದ್ಧ ಮನೋಜ್, ಸಂತ ಅನ್ನಮ್ಮ ಪ್ರೌಢಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ, ದ್ವಿತೀಯ-ಹರ್ಷಿತ ಎನ್, ಸರ್ಕಾರಿ ಪ್ರೌಢಶಾಲೆ, ತುಂಗಣಿ, ಕನಕಪುರ ತಾ. ರಾಮನಗರ ಜಿಲ್ಲೆ, ತೃತೀಯ – ತೋಹಿದ್ ಅಹ್ಮದ್ ಲಾಡಜಿ, ಗೈಡ್ ಆಂಗ್ಲ ಮಾಧ್ಯಮ ಶಾಲೆ, ತಿಳವಳ್ಳಿ, ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ.
ಪದವಿ ಪೂರ್ವ ವಿಭಾಗದಲ್ಲಿ ಪ್ರಥಮ : ಹೃತ್ಪೂರ್ವಕ್ ಕೆ.ಎಸ್. ಸಂತ ಮೈಕಲರ ಕಾಲೇಜು, ಮಡಿಕೇರಿ ಕೊಡಗು ಜಿಲ್ಲೆ, ದ್ವಿತೀಯ-ಉದಯಕುಮಾರ್ ಎಂ.ಎಸ್. ಸರ್ಕಾರಿ ಪ.ಪೂ.ಕಾಲೇಜು ಮಂಡ್ಯ, ತೃತೀಯ-ಮೀನ ಎಂ, ಶ್ರೀಕೊಂಗಾಡಿಯಪ್ಪ ಪಿ.ಯು.ಕಾಲೇಜು, ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ-ದರ್ಶಿನಿ ಡಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿವಮೊಗ್ಗ, ದ್ವಿತೀಯ-ಕಾವ್ಯಾ ಚಿಪ್ಪಲಕಟ್ಟಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಗಲಕೋಟ, ತೃತೀಯ-ಕುಸುಮಾಬಾಯಿ ಆರ್, ಜೆಎಸ್‍ಎಸ್ ಕಲಾ ಕಾಲೇಜು ಮೈಸೂರು ಇವರು ವಿಜೇತರಾಗಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿಗಳಾದ ಡಾ.ಕೆ.ವಿ.ತ್ರಿಲೋಕಚಂದ್ರ, ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್, ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸಿದ್ದೇಶ್ವರಪ್ಪ ಜಿ.ಬಿ,ಉಪ ನಿರ್ದೇಶಕರಾದ ರಾಮಲಿಂಗಪ್ಪ ಬಿ.ಕೆ. ಮತ್ತಿತರರು ಇದ್ದರು.