ಸಿದ್ದಾಪುರ ಫೆ.9 : ಆದಿವಾಸಿಗಳ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದರ ಮೂಲಕ ಸರ್ಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಾಡಿ ನಿವಾಸಿಗಳ ಸಂಯುಕ್ತ ಆಶ್ರಯದಲ್ಲಿ ಗಿರಿಜನ ಆಶ್ರಮ ಶಾಲೆಯ 60ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಕಾಡಂಚಿನಲ್ಲಿ ವಾಸವಾಗಿರುವ ಆದಿವಾಸಿಗಳ ಗ್ರಾಮಗಳನ್ನ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಅಭಿವೃದ್ಧಿಯೊಂದಿಗೆ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು,
ಅಭಿವೃದ್ಧಿ ಕಾರ್ಯಗಳು ಅಂತಂತವಾಗಿ ನಡೆಯಲಿದೆ. ಮನೆ ಇಲ್ಲದೆ ಸಂಕಷ್ಟದಲ್ಲಿರುವ ಆದಿವಾಸಿ ಕುಟುಂಬಗಳನ್ನ ಗುರುತಿಸಿ ಸುಮಾರು 483 ಮನೆಗಳನ್ನ ತಲಾ ನಾಲ್ಕುವರೆ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.
ಹಲವು ವರ್ಷಗಳಿಂದಲೂ ವಿದ್ಯುತ್ ಬೆಳಕನ್ನೇ ಕಾಣದೆ ಕತ್ತಲ ಜೀವನ ನಡೆಸುತ್ತಿರುವ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ದುಬಾರೆ ಹಾಡಿಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು 12 ಹಾಡಿಗಳನ್ನು ಗುರುತಿಸಲಾಗಿದ್ದು ಸದ್ಯದಲ್ಲೇ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ. ಜಿಲ್ಲಾ ಪಂಚಾಯಿತಿ ಮೂಲಕ ಈ ಭಾಗದ ಹಾಡಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಡಿ ಮುಖಂಡರುಗಳ ಬೇಡಿಕೆಯಂತೆ ಆಶ್ರಮ ಶಾಲೆಯ ಅಭಿವೃದ್ಧಿಗೆ 60 ಲಕ್ಷ ಅನುದಾನ ಸರ್ಕಾರ ಬಿಡುಗಡೆಗೊಳಿಸಿದ್ದು ಆಶ್ರಮ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರ ಮೂಲಕ ಶಿಕ್ಷಣದ ಭವಿಷ್ಯರೂಪಿಸಿದಲ್ಲಿ ಸಮಾಜದಲ್ಲಿ ಉನ್ನತ ಶಿಕ್ಷಣದ ಮೂಲಕ ಮುಂದೆ ಬರಲಿದ್ದಾರೆ ಎಂದು ಹೇಳಿದರು.
ಆದಿವಾಸಿಗಳು ದುಶ್ಚಟಗಳಿಂದ ದೂರವಿದ್ದು, ಅಭಿವೃದ್ಧಿಯೊಂದಿಗೆ ಮುನ್ನಡೆದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಕೆಲವರು ಆದಿವಾಸಿ ಯುವಕರನ್ನ ದುಶ್ಚಟಗಳ ಮೂಲಕ ಅವರ ಭವಿಷ್ಯವನ್ನ ಹಾಳು ಮಾಡುತ್ತಿದ್ದು ಆದಿವಾಸಿಗಳು
ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ತಿತಿಮತಿ ಸಮೀಪದ ಹಾಡಿಯೊಂದರ ನೂರಾರು ನಿವಾಸಿಗಳು ಮಧ್ಯಮುಕ್ತ ಗ್ರಾಮವನ್ನಾಗಿಸಿ ಆರೋಗ್ಯವಂತರಾಗಿ ಅಭಿವೃದ್ಧಿಯೊಂದಿಗೆ ಜೀವನ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರನ್ನ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಸಾಗುತ್ತಿಸಲಾಯಿತು.
ಇದೇ ಸಂದರ್ಭ ಆಶ್ರಮ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ನಡೆದ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರದಿದ್ದವರ ಗಮನ ಸೆಳೆಯಿತು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎ. ಎಂ. ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಪ್ರಕಾಶ್,
ವನ್ಯ ಜೀವಿ ಛಾಯಾಗ್ರಾಹಕ ಕುಞಂಡ ಮಹೇಶ್ ಅಪ್ಪಯ್ಯ,ಮುಳಿಯ ವ್ಯವಸ್ಥಾಪಕ ಬಿ.ಎಸ್. ಕಿಶೋರ್,ಚೆನ್ನಯ್ಯನಕೋಟೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಬಿ. ಸಿ. ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ, ಆದಿವಾಸಿ ಮುಖಂಡರುಗಳಾದ ಜೆ.ಕೆ ರಾಮು, ಜೆ.ಕೆ ಅಪ್ಪಾಜಿ, ಜೆ.ಕೆ ಮುತ್ತಮ್ಮ,ಲಿಂಗಮ್ಮ, ಇಂದಿರಾ,ಶಂಕರ ಪ್ರಮುಖರಾದ ಧರ್ಮಜ ಉತ್ತಪ್ಪ, ಕರವಟೀರ ಬೆಲ್ಲು ಮೇದಪ್ಪ, ಮೂಡಗದ್ದೆ ಎಂ. ಕೆ. ಪೂಣಚ್ಚ,ರಾಕೇಶ್ ಸಾಗರ್, ಹೆಚ್. ಆರ್. ಅರ್ಜುನ್,ಬಾವ ಮಾಲ್ದಾರೆ,ಕುಮಾರ್, ಹನೀಪ್, ಶಾಲಾ ಸಹ ಶಿಕ್ಷಕರುಗಳಾದ ವೆಂಕಟಮೂರ್ತಿ, ಪವಿತ್ರ, ಲೋಹಿತ್, ಸಿಂಧು, ಪೂರ್ಣಿಮಾ, ವಿದ್ಯಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








