ಮಡಿಕೇರಿ ಫೆ.12 NEWS DESK : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ 8 ತಿಂಗಳುಗಳಷ್ಟೇ ಆಗಿದೆ, ಜಿಲ್ಲೆಯ ಇಬ್ಬರು ಶಾಸಕರ ಅವಧಿಯೂ ಇಷ್ಟೇ ಆಗಿದೆ. ಇದನ್ನು ಅರಿಯದ ಬಿಜೆಪಿ ಮಂದಿ ಕಮಲದ ಗುರುತಿನ ಶಾಲನ್ನು ಹಾಕಿಕೊಂಡು ಶಾಸಕರ ಕಚೇರಿಗೆ ತೆರಳಿ ಅಭಿವೃದ್ಧಿ ಕುರಿತು 15 ಪ್ರಶ್ನೆಗಳ ಪತ್ರ ನೀಡಿರುವುದು ಹಾಸ್ಯಾಸ್ಪದ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಕೊಡಗಿನಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಶಾಸಕರುಗಳ ಕೊಡುಗೆ ಏನು ಎನ್ನುವುದನ್ನು ಮೊದಲು ಸಾಬೀತು ಪಡಿಸಲಿ ಎಂದು ಒತ್ತಾಯಿಸಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಇಲ್ಲದ ಸಂದರ್ಭ ಅವರ ಗೃಹ ಕಚೇರಿಗೆ ಬಿಜೆಪಿಯ ಮಂದಿ ತೆರಳಿ 15 ಪ್ರಶ್ನೆಗಳ ಪತ್ರ ನೀಡಿರುವುದು ಖಂಡನೀಯ. ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಕಳೆದ 8 ತಿಂಗಳಿನಿಂದ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸುತ್ತಾ ಬರುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಸಾಕಷ್ಟು ಸಮಯದ ಅವಕಾಶ ಬೇಕಾಗುತ್ತದೆ. ಆದರೆ ಶಾಸಕರಿಲ್ಲದ ಸಂದರ್ಭ ಕಚೇರಿಗೆ ಹೋಗುವ ಅನಿವಾರ್ಯತೆ ಮತ್ತು ಶಾಸಕರ ಆಪ್ತ ಸಹಾಯಕರೊಂದಿಗೆ ಲೆಕ್ಕ ಕೇಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.
ಇಪ್ಪತ್ತೈದು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿತ್ತು. ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ನಂತರ ಅಧಿಕಾರದಲ್ಲಿದ್ದ ಬಿಜೆಪಿ ಶಾಸಕರ ಹೊಣೆಯಾಗಿತ್ತು. ಆದರೆ ಯಾವುದೇ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಈಗಷ್ಟೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಶಾಸಕರನ್ನು ಪ್ರಶ್ನಿಸುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನೂತನ ಶಾಸಕರ ಕಾರ್ಯವೈಖರಿಯನ್ನು ಸಹಿಸಿಕೊಳ್ಳಲಾಗದೆ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದಾಗ ಕಾಂಗ್ರೆಸಿಗರು ಎಂದೂ ದ್ವೇಷ ರಾಜಕರಣ ಪ್ರದರ್ಶಿಸಿಲ್ಲ, ಕೊಡಗಿನ ಜನರ ಸಮಸ್ಯೆಗಳನ್ನು ಅರಿತಿರುವ ಇಬ್ಬರೂ ಶಾಸಕರು ಜನರಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಸಂಕಷ್ಟದ ಸಂದರ್ಭದಲ್ಲೂ ಸಂತ್ರಸ್ತರ ಬಳಿಗೆ ತೆರಳಿ ಸಾಂತ್ವನ ಹೇಳುವ ದೊಡ್ಡ ಗುಣ ಹೊಂದಿದ್ದಾರೆ. ದಿನದಿಂದ ದಿನಕ್ಕೆ ಇಬ್ಬರು ಶಾಸಕರ ಜನಪ್ರಿಯತೆ ಹೆಚ್ಚಾಗುತ್ತಿದೆ. ಇದನ್ನು ಬಿಜೆಪಿ ಮಂದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಉತ್ಸಾಹಿ ಶಾಸಕದ್ವಯರಿಂದ ಜಿಲ್ಲೆ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.
ಒಬ್ಬ ಜನಪ್ರತಿನಿಧಿ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಗುಣ ಅಳವಡಿಸಿಕೊಂಡಿರಬೇಕು. ಧರ್ಮದ ಆಧಾರದಲ್ಲಿ ಯಾರೂ ರಾಜಕೀಯ ಮಾಡಬಾರದು, ನಾವು ಕೂಡ ಹಿಂದೂಗಳೆ, ರಾಮಮಂದಿರ ಕೇವಲ ಬಿಜೆಪಿಗರ ಕೊಡುಗೆಯಲ್ಲ, ಎಲ್ಲರ ಶ್ರಮದಿಂದ ನಿರ್ಮಾಣವಾಗಿದೆ ಎಂದು ಪ್ರತಿಪಾದಿಸಿದರು.
::: ಕೊಡುಗೆ ಶೂನ್ಯ :::
ಕೊಡಗು ಜಿಲ್ಲೆಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಶೂನ್ಯ ಎಂದು ಟೀಕಿಸಿದ ವೀಣಾ ಅಚ್ಚಯ್ಯ, ಕಳೆದ ಹತ್ತು ವರ್ಷಗಳಿಂದ ಸಮಸ್ಯೆಗಳಿದ್ದಾಗ ಜಿಲ್ಲೆಗೆ ಬಾರದ ಸಂಸದರು ಈಗ ಕಾಣಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಡಿ ಯಾವ ನೆರವನ್ನು ತಂದಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿಗಳ ಆಪ್ತ ಎಂದು ಪ್ರತಿಬಿಂಬಿಸಿಕೊಳ್ಳುವ ಸಂಸದರಿಗೆ ತಮ್ಮ ಕ್ಷೇತ್ರದ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ, ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
::: ಜನ ನಮ್ಮೊಂದಿಗಿದ್ದಾರೆ :::
ರಾಜ್ಯದ ಮತದಾರರು ಬಿಜೆಪಿಯ ಸುಳ್ಳುಗಳಿಗೆ ಮಾರು ಹೋಗುವುದಿಲ್ಲ, ಜನಸಾಮಾನ್ಯರ ಪರವಾಗಿರುವ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಪೂರೈಸುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಪ್ರಾಕೃತಿಕ ವಿಕೋಪ ಹಾನಿಯನ್ನು ವೀಕ್ಷಿಸಲು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಿಜೆಪಿಗರು ಅವಮಾನಿಸಿದ್ದರು. ಆದರೆ ಇಂದು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜಿಲ್ಲೆಗೆ ಆಗಮಿಸಿ ಸನ್ಮಾನ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ. ಬಿಜೆಪಿ ಮೊದಲು ತನ್ನ ನಡೆಯನ್ನು ಸರಿಪಡಿಸಿಕೊಳ್ಳಲಿ ಎಂದರು.
ನಗರಸಭೆಯಲ್ಲಿ ಬೇಕಾದಷ್ಟು ಹಣವಿದ್ದರೂ ನಗರ ಅಭಿವೃದ್ಧಿ ಕಾಣುತ್ತಿಲ್ಲ, ನಗರಸಭಾ ಅಧ್ಯಕ್ಷರ ಕಾರ್ಯವೈಖರಿ ನೀರಸವಾಗಿದೆ. ಅಭಿವೃದ್ಧಿ ಪರ ಕಾಳಜಿಯ ಮಾತನಾಡುವ ಬಿಜೆಪಿ ತನ್ನದೇ ನೇತೃತ್ವದ ಆಡಳಿತವಿರುವ ನಗರಸಭೆಯ ವೈಫಲ್ಯತೆಯ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ವೀಣಾ ಅಚ್ಚಯ್ಯ ತಿರುಗೇಟು ನೀಡಿದರು.
ನಗರದ ಚೈನ್‍ಗೇಟ್ ಬಳಿ ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲಿರುವ ಅವೈಜ್ಞಾನಿಕವಾದ ಮತ್ತು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬಸ್ ನಿಲ್ದಾಣವನ್ನು ತಕ್ಷಣ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಮಂಡೀರ ಸದಾ ಮುದ್ದಪ್ಪ ಹಾಗೂ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಉಪಸ್ಥಿತರಿದ್ದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*