ಮಡಿಕೇರಿ ಫೆ.17 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸುಂಟಿಕೊಪ್ಪದಲ್ಲಿ ನಡೆಸಲು ಜಿಲ್ಲಾ ಸಮಿತಿಯು ತನ್ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದೆ. ಮಡಿಕೇರಿಯ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಾರ್ಚ್ ಎರಡನೇ ವಾರದಲ್ಲಿ ಈ ಸಮ್ಮೇಳನವು ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಕೇಂದ್ರ ಸಮಿತಿ ನೀಡುವ ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಕೊಡಗು ಜಿಲ್ಲೆಯ ಬರಹಗಾರ್ತಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ನಿರ್ದೇಶಕರಾದ ಹಂಚೆಟೀರ ಫ್ಯಾನ್ಸಿ ಮುತ್ತಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಹಂಚಿಟೀರ ಫ್ಯಾನ್ಸಿ ಮುತ್ತಣ್ಣ ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳೆಯ ಸಮಸ್ಯೆ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಕಾಡು ಹಕ್ಕಿಯ ಹಾಡು, ಸಾವಿರಾರು ನೆನಪುಗಳು, ಕನವರಿಕೆ, ಒಡಲ ಉರಿ ಸೇರಿದಂತೆ ಹಲವಾರು ಕೃತಿಗಳನ್ನು ವಿಶೇಷ ಲೇಖನಗಳನ್ನು ಬರೆದಿರುವ ಫ್ಯಾನ್ಸಿ ಅವರು ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದು ಅಭಿನಂದಿಸಿದರು.
2022 – 23ನೇ ಸಾಲಿನ 24 ದತ್ತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ನಿರ್ವಹಿಸಿದಕ್ಕಾಗಿ ಜಿಲ್ಲಾ ಸಮಿತಿಯ ಕಾರ್ಯಕಾರಿ ಮಂಡಳಿಯನ್ನು ತಾಲೂಕು ಮತ್ತು ಹೋಬಳಿಯ ಕಾರ್ಯಕಾರಿ ಮಂಡಳಿಯನ್ನು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಭಿನಂದಿಸಿದರು. ಮಾರ್ಚ್ ತಿಂಗಳ ಒಳಗಾಗಿ 23 – 24 ನೇ ಸಾಲಿನ 28 ದತ್ತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹಕಾರ ಕೋರಿದರು.
2023 – 24 ನೇ ಸಾಲಿನ ದತ್ತಿ ಕಾರ್ಯಕ್ರಮದಲ್ಲಿ ಈಗಾಗಲೇ ಗೌರಮ್ಮ ದತ್ತಿ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದ್ದು, ಎಂಟು ಮಹಿಳಾ ಲೇಖಕರು ತಮ್ಮ ಕೃತಿಗಳನ್ನು ಸ್ಪರ್ಧೆಗೆ ಕಳುಹಿಸಿದ್ದಾರೆ. ಅದನ್ನು ಉತ್ತಮ ತೀರ್ಪುಗಾರರಿಂದ ವಿಶ್ಲೇಷಣೆಗೆ ಒಳಪಡಿಸಿ ಪ್ರಶಸ್ತಿ ನೀಡಲಾಗುವುದು. ಅಲ್ಲದೆ ಪ್ರೌಢಶಾಲಾ ಮಕ್ಕಳಿಗೆ ಗೌರಮ್ಮ ಸಣ್ಣ ಕಥೆಗಳ ಸ್ಪರ್ಧೆ ಏರ್ಪಡಿಸಲಾಗಿದೆ ಮತ್ತು ಗೋಪಾಲಕೃಷ್ಣ ದತ್ತಿನಿಧಿ ಕಾರ್ಯಕ್ರಮವನ್ನು ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ರವರು ನಿರ್ವಹಿಸುತ್ತಿದ್ದು 25ಕ್ಕೂ ಹೆಚ್ಚು ಕಥೆಗಾರರು ಸ್ಪರ್ಧೆಗೆ ಬರಹಗಳನ್ನು ಕಳಿಸಿರುತ್ತಾರೆ. ಅಲ್ಲದೇ ಈ ಬಾರಿ ನಾ.ಡಿಸೋಜಾ ದತ್ತಿ ಕಾರ್ಯಕ್ರಮದ ಆಶಯದಂತೆ ನಾಟಕ ತರಬೇತಿ ಶಿಬಿರ ಮತ್ತು ಪ್ರದರ್ಶನ ಏರ್ಪಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸದಸ್ಯತ್ವ ಆಂದೋಲನ ಯಶಸ್ವಿಯಾಗಿ ನಡೆಸುವಂತೆ ಮಾರ್ಚ್ ಅಂತ್ಯದೊಳಗಾಗಿ 1,000 ನೂತನ ಸದಸ್ಯರನ್ನಾಗಿ ಮಾಡುವಂತೆ ತೀರ್ಮಾನಿಸಲಾಯಿತು. ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಈಗಾಗಲೇ 14 ನೂತನ ದತ್ತಿಗಳನ್ನು ಸ್ಥಾಪನೆ ಮಾಡಲಾಗಿದ್ದು, ಒಟ್ಟಾಗಿ ಜಿಲ್ಲೆಯಲ್ಲಿ ಈಗ 30 ದತ್ತಿಗಳು ಸ್ಥಾಪನೆ ಆಗಿರುತ್ತದೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸ್ಥಾಪನೆಗೆ ದತ್ತಿ ಸ್ಥಾಪನೆಗೆ ಪ್ರಯತ್ನ ಪಡುವಂತೆ ತೀರ್ಮಾನಿಸಲಾಯಿತು. ಸನ್ಮಾನ ಸಂಧರ್ಭದಲ್ಲಿ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನಿರ್ ಅಹಮದ್, ರೇವತಿ ರಮೇಶ್, ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಮಡಿಕೇರಿ ತಾಲೂಕು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ನಿರ್ದೇಶಕರುಗಳಾದ ಟಿ.ಪಿ.ರಮೇಶ್, ಕೆ.ಟಿ.ಬೇಬಿಮ್ಯಾಥ್ಯೂ, ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಶ್ರೀಮತಿ ಜೀ ರಮ್ಯಾ, ಚಂದನ್ ಕಾಮತ್ ಮತ್ತು ಕಚೇರಿ ಸಿಬ್ಬಂದಿ ರೇಣುಕಾ ಉಪಸಿದ್ಧರಿದ್ದರು ಸಭೆಯ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಕಳೆದ ಸಭೆಯ ವರದಿ ವಾಚನ ಮಾಡಿದರು. ಇನೋರ್ವ ಗೌರವ ಕಾರ್ಯದರ್ಶಿ ಮುನೀರ್ ಅಹ್ಮದ್ ವಂದಿಸಿದರು.








