ಮಡಿಕೇರಿ ಫೆ.26 NEWS DESK: ಸತತ 4 ಸಾಮಾನ್ಯ ಸಭೆಗೆ ಗೈರು ಹಾಜರಾದ ಪೊನ್ನಂಪೇಟೆ ಗ್ರಾ.ಪಂ ಸದಸ್ಯೆ ಪಿ.ಆರ್.ಮಂಜುಳ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಪೊನ್ನಂಪೇಟೆ ಗ್ರಾ.ಪಂ ಯ 5ನೇ ವಾರ್ಡ್ ಕಾಟ್ರಕೊಲ್ಲಿಯ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು.
ಪ್ರಕರಣ ಸಂಖ್ಯೆ 43ರ ಅಡಿಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರು ಮಂಜುಳಾ ಅವರನ್ನು ಅನರ್ಹಗೊಳಿಸಿ ಮುಂದಿನ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದ ಪಿ.ಆರ್.ಮಂಜುಳ ಎರಡೂವರೆ ವರ್ಷಗಳ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಸಂದರ್ಭ ಬಿಜೆಪಿ ಬೆಂಬಲಿತರಿಗೆ ಅಡ್ಡ ಮತದಾನ ಮಾಡಿದ್ದರು ಎನ್ನುವ ಆರೋಪವೂ ಇದೆ. ಪೊನ್ನಂಪೇಟೆ ಗ್ರಾ.ಪಂ ಒಟ್ಟು 20 ಸದಸ್ಯ ಬಲವನ್ನು ಹೊಂದಿದ್ದು, ಮಂಜುಳ ಸೇರಿ ಬಿಜೆಪಿ ಬಲ 11 ಮತ್ತು ಕಾಂಗ್ರೆಸ್ ಬಲ 9 ಇದೆ.









