ವಿರಾಜಪೇಟೆ ಫೆ.29 NEWS DESK : ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಉಪನ್ಯಾಸಕ ಟಿ.ಎಲ್.ತ್ಯಾಗರಾಜು, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ 43 ನದಿನಗಳ ರಾಜ್ಯವ್ಯಾಪಿ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸಕಾರಾತ್ಮಕವಾದ ಸ್ಪಂದನೆ ನೀಡಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಮ್ಮ ಬೇಡಿಕೆಗೆ ಮಾಹಿತಿ ನೀಡಿದಕ್ಕೆ ಅಭಿನಂದನೆ ಸಲ್ಲಿಸಿದರು.
2009 ಜುಲೈ 11 ರ ಒಳಗೆ ಎಂ.ಫೀಲ್ ಮುಗಿಸಿದವರು ಯುಜಿಸಿ ಮಾನದಂಡಕ್ಕೆ ಅರ್ಹತರಾಗಿದ್ದು, ಅವರನ್ನು ನೆಟ್ ಮತ್ತು ಸ್ಲೆಟ್ ಸಮಾನರು ಎಂದು ಆದೇಶ ಮಾಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕರ ಮನವಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ನಿಮ್ಮ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಯಾವ ತೊಂದರೆ ಅಗದಂತೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಕಾಲೇಜಿನ ಅತಿಥಿ ಉಪನ್ಯಾಸಕರುಗಳಾದ ಡಾ.ಪ್ರಭು, ಎಂ.ಎನ್.ಮೋಹನ್ ಕುಮಾರ್, ಕೆ.ಎಸ್ ಕಾರ್ಯಪ್ಪ, ಸುಮಯ್ಯ ತಬಸುಮ್, ಧನ್ಯಾ, ದರ್ಶಿನಿ ದೇವಯ್ಯ, ರೂಪ, ಗೀತಾ, ವೀಣಾ, ಬೊಳ್ಳಮ್ಮ ಹಾಜರಿದ್ದರು.