ಕಡಂಗ ಮಾ.1 NEWS DESK : ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಎಲ್ಲರೂ ಪಣ ತೊಡಬೇಕು ಎಂದು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಪೊದವಾಡ ಗ್ರಾಮದಲ್ಲಿ 8ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ವಚ್ಛ ಸಂಕಿರ್ಣ ಘಟಕ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಘನತ್ಯಾಜ್ಯ ನಿವಾರಣೆ ಎಂಬುವುದು ಪಂಚಾಯಿತಿಗಳ ಮುಂದೆ ಇರುವ ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಜಿಲ್ಲೆಗೆ ಅಪಾಯಕಾರಿ ಆದಂತಹ ಪರಿಸ್ಥಿತಿ ಉದ್ಭವಕ್ಕೆ ಘನತ್ಯಾಜ್ಯ ನಿವಾರಣೆಯಲ್ಲಿ ಆಡಳಿತ ವೈಫಲ್ಯವೇ ಮುಖ್ಯ ಕಾರಣ. ಅದನ್ನು ನಿವಾರಿಸಲು ರಸ್ತೆ ಬದಿಗಳಲ್ಲಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಉತ್ತಮ ಪರಿಸರ ನಿರ್ಮಾಣಮಾಡಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಪೂಜಾ ಕೈಂಕರ್ಯಗಳನ್ನು ಅರ್ಚಕರಾದ ಕೀರ್ತಿಸ್ ನೆರವೇರಿಸಿದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ನರಿಯಂದಡ ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸದಸ್ಯರಾದ ಸುಬೈರ್, ವಾಣಿ, ಕವಿತ, ಪ್ರಮುಖರಾದ ಗಣು ಕುಶಾಲಪ್ಪ, ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಸಂಜೀವಿನಿ ಒಕ್ಕೂಟದ ಸದಸ್ಯರು, ಗುತ್ತಿಗೆದಾರ ಶಬೀಲ್, ಗ್ರಾಮಸ್ಥರು, ಮತಿತ್ತರರು ಉಪಸ್ಥಿತರಿದ್ದರು.
ವರದಿ : ನೌಫಲ್ ಕಡಂಗ