ಮಡಿಕೇರಿ ಮಾ.1 NEWS DESK : ಪಲ್ಸ್ ಪೊಲಿಯೊ ಕಾರ್ಯಕ್ರಮ ಸಂಬಂದಿಸಿದಂತೆ ಕೊಡಗು ಜಿಲ್ಲೆಯಲ್ಲಿ 0-5 ವರ್ಷದೊಳಗಿನ ಮಕ್ಕಳ ಒಟ್ಟು 36,595 ಗುರುತಿಸಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ 32,261 ಮಕ್ಕಳು ಹಾಗು ನಗರ ಪ್ರದೇಶದಲ್ಲಿ 4,334 ಮಕ್ಕಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಒಟ್ಟು ಜನಸಂಖ್ಯೆಯಲ್ಲಿ 890 ವಲಸೆ ಪ್ರದೇಶಗಳನ್ನು ಗುರುತಿಸಿದ್ದು, ಒಟ್ಟು ವಲಸಿಗರ ಜನಸಂಖ್ಯೆ 24,021 ಇದ್ದು, ಇವರಲ್ಲಿ 0-5 ವರ್ಷದೊಳಗಿನ ಒಟ್ಟು 3143 ಮಕ್ಕಳನ್ನು ಗುರುತಿಸಲಾಗಿದೆ. ಸ್ಥಿರ ವಾಸಿತ ವಲಸಿಗರ 350 ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಟ್ಟು ಜನಸಂಖ್ಯೆ 2,66,770 ಇದ್ದು, ಇವರಲ್ಲಿ 0-5 ವರ್ಷದೊಳಗಿನ 14,460 ಮಕ್ಕಳನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 464 ಬೂತ್‍ಗಳನ್ನು ತೆರೆಯಲಾಗುತ್ತಿದ್ದು, ಜನಸಂದಣಿ ಇರುವ ಪ್ರದೇಶ ಮತ್ತು ಬಸ್ ನಿಲ್ದಾಣಗಳು ಹಾಗೂ ಪ್ರವಾಸಿ ಕೇಂದ್ರಗಳನ್ನು ಗುರಿಯಾಗಿಸಿ 31 ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗುವುದು. ಮಡಿಕೇರಿ ತಾಲ್ಲೂಕಿನಲ್ಲಿ 01 ಸಂಚಾರಿ ತಂಡದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಲಸಿಕಾ ಬೂತ್‍ಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 1,920 ಲಸಿಕೆ ಹಾಕುವವರನ್ನು, 86 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. 2ನೇ ಹಾಗೂ 3ನೇ ದಿನದಂದು ಗ್ರಾಮೀಣ ಪ್ರದೇಶದಲ್ಲಿ ಹಾಗೂ ಎರಡನೇ ದಿನದಿಂದ ನಾಲ್ಕನೇ ದಿನದವರೆಗೆ ನಗರ ಪ್ರದೇಶದಲ್ಲಿ ಮನೆ ಮನೆ ಭೇಟಿ ನೀಡಿ ಬಿಟ್ಟು ಹೋಗಿರುವ ಅಥವಾ ಅಲ್ಲಿರುವ ಮನೆಗಳಿಗೆ ಹೊಸದಾಗಿ ಬರುವ ಮಕ್ಕಳನ್ನು ಗುರುತಿಸಿ ಲಸಿಕೆಯನ್ನು ನೀಡಲಾಗುವುದು. ಜಿಲ್ಲೆಯಲ್ಲಿ ಗುರುತಿಸಲಾಗಿರುವ ಒಟ್ಟು 1,29,207 ಮನೆಗಳಿಗೆ ಮನೆ-ಮನೆ ಭೇಟಿ ನೀಡಲು ಒಟ್ಟು 928 ತಂಡಗಳನ್ನು ರಚಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಲಸಿಕೆ ನೀಡಲು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನಗರ ಪ್ರದೇಶಗಳಲ್ಲಿ ಲಸಿಕೆ ನೀಡಲು ಅವಶ್ಯಕತೆ ಇರುವ ಕಡೆಗಳಲ್ಲಿ ತರಬೇತಿಯಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರನ್ನು ನೇಮಿಸಿಕೊಳ್ಳಲಾಗಿದೆ.
ಪ್ರವಾಸಿ ಸ್ಥಳಗಳು, ಜನಸಂದಣಿ ಹೆಚ್ಚು ಇರುವ ಕಡೆ ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗುವುದು. ಲಸಿಕಾ ಕಾರ್ಯಕರ್ತೆಯರು ಇಲ್ಲಿ ಕಂಡು ಬರುವ ಮಕ್ಕಳಿಗೆ ಲಸಿಕೆಯನ್ನು ನೀಡುವರು. ಎಲ್ಲಾ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಟ್ರಾನ್ಸಿಟ್ ಬೂತ್‍ಗಳನ್ನು ತೆರೆಯಲಾಗುವುದು. ಒಂದರಿಂದ ನಾಲ್ಕನೇ ದಿನದವರೆಗಿನ ದಿನಗಳಲ್ಲಿ ಸಂತೆ ನಡೆಯುವ ಸ್ಥಳಗಳಲ್ಲಿ ಸಹ ಟ್ರಾನ್ಸಿಟ್ ಬೂತ್‍ಗಳನ್ನು ತೆರೆದು ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುವುದು.
ಕಾರ್ಮಿಕರು ಹೆಚ್ಚಾಗಿ ಇರುವ ತೋಟಗಳನ್ನು ಗುರಿಯಾಗಿಸಿ, ಮನೆ ಮನೆಗೆ ಭೇಟಿ ಸಂದರ್ಭದಲ್ಲಿ ಇಂತಹ ಪ್ರದೇಶಗಳಲ್ಲಿ ಕಂಡುಬರುವ ಮಕ್ಕಳಿಗೆ ಲಸಿಕೆ ನೀಡಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಮೇಲ್ವಿಚಾರಕರಿಗೆ ಮಾಹಿತಿ ಸೂಚಿಸಲಾಗಿದೆ.
ಸಾರ್ವಜನಿಕರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸದುಪಯೋಗ ಮಾಡಿಕೊಂಡು ತಮ್ಮ ಮನೆಯಲ್ಲಿರುವ 0-5 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ತಮ್ಮ ಮನೆಯ ಸಮೀಪವಾಗಲಿ ಅಥವಾ ತಮ್ಮ ತೋಟದಲ್ಲಿ ಕಾರ್ಮಿಕರ ಮಕ್ಕಳೇ ಇರಲಿ ಅಥವಾ ತಮ್ಮ ಮನೆಯ ಸಮೀಪಕ್ಕೆ ಹೊಸದಾಗಿ ಬಂದಿರುವ ಕುಟುಂಬಗಳಲ್ಲಿ 5 ವರ್ಷದೊಳಗಿನ ಮಕ್ಕಳು ಕಂಡುಬಂದಲ್ಲಿ ಹಾಗೂ ತಮ್ಮ ಗಮನಕ್ಕೆ ಬರುವ ಯಾವುದೇ ಮಗುವನ್ನು ಹತ್ತಿರದ ಲಸಿಕಾ ಬೂತ್‍ಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.