ಮಡಿಕೇರಿ ಮಾ.4 NEWS DESK : ಆಧುನಿಕ ಕಾಲದ ಭರಾಟೆಯಲ್ಲಿ ನಮ್ಮ ರಂಗಭೂಮಿಯ ಕಲೆಗಳ ವಿನಾಶಕ್ಕೆ ನಾವು ಕಾರಣರಾಗದೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾದ್ಯಾಪಕಿ ಪ್ರತಿಮಾ ಹರೀಶ್ ರೈ ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಡಿಕೇರಿ ಪತ್ರಿಕಾ ಭವನದಲ್ಲಿ ಸಾಹಿತಿ ನಾ. ಡಿ’ಸೋಜ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಫ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಲಿತಕಲೆಗಳಲ್ಲಿ ರಂಗ ಭೂಮಿಯ ಕಲಾ ಪ್ರಕಾರಗಳು ಪೂರ್ವಿಕರಿಂದ ನೆಲೆಯೂರಿ ಬೆಳೆದಿದ್ದು, ಚಲನಚಿತ್ರಗಳ ಆರಂಭವಾಗುವುದಕ್ಕೆ ಮೊದಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದ ಕಲಾವಿದರ ಪ್ರತಿಭೆ ಅದ್ಭುತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಾಯಣ, ನೀನಾಸಂ ಇನ್ನಿತರ ಸಂಸ್ಥೆಗಳು ಸಾಮಾಜಿಕ ಪೌರಾಣಿಕ, ಹಾಸ್ಯ ಮತ್ತು ಸಮಾಜಮುಖಿ ನಾಟಕಗಳ ಪ್ರದರ್ಶನದಿಂದ ಸಮಾಜ ಪರಿವರ್ತನೆಗೊಂಡಂತೆ ಇಂದಿನ ಆಧುನಿಕ ಯುಗದಲ್ಲಿರುವ ನಮ್ಮ ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳಲ್ಲಿ ಅಡಕವಾಗಿರುವ ನಾಟಕಗಳನ್ನು ಅಭ್ಯಾಸ ಮಾಡುವುದರೊಂದಿಗೆ ಅವುಗಳನ್ನು ಅಭಿನಯಿಸಿ ಪ್ರದರ್ಶನ ನೀಡಿ ವಿದ್ಯಾರ್ಥಿ ದೆಸೆಯಲ್ಲಿ ನಾಟಕ ಕಲೆಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕೆಂದರು. ಪ್ರಾಯೋಗಿಕವಾಗಿ ಇಂದು ಆರಂಭಗೊಂಡ ವಿದ್ಯಾರ್ಥಿಗಳ ನಾಟಕ ಸ್ಪರ್ಧೆ ಮುಂದೆ ಜಿಲ್ಲೆಯಾಧ್ಯಂತ ಹೆಮ್ಮರವಾಗಿ ಬೆಳೆಯಲೆಂದು ಆಶಿಸಿದರು.
ರಂಗಭೂಮಿ ಕಲಾವಿದ ಹಾಗೂ ಮಡಿಕೇರಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರವೀಣ್ ಮಾತನಾಡಿ, ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯಲ್ಲಿ ವಿದ್ಯಾರ್ಥಿಗಳ ನಾಟಕೋತ್ಸವವನ್ನು ಆಯೋಜಿಸುವಂತಾಗಬೇಕೆಂದು ಮನವಿ ಮಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ನಾಟಕ ಕಲೆಯ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ನಾವುಗಳು ಮುಂದಾದಲ್ಲಿ ಉತ್ತಮ ತರಬೇತಿಯೊಂದಿಗೆ ಒಳ್ಳೆಯ ಕಲಾವಿದರುಗಳನ್ನು ಬೆಳೆಸಿ ಹೊರಹೊಮ್ಮಲು ಸಾಧ್ಯ ಎಂದರು. ರಂಗಭೂಮಿ ಕಲಾವಿದ ಪ್ರವೀಣ್ ಅವರ ಪ್ರೇರಣೆಯಿಂದಾಗಿ ಪ್ರಾಯೋಗಿಕವಾಗಿ ನಾಟಕ ಸ್ಪರ್ಧೆ ನಡೆಯುತ್ತಿರುವುದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆಗಾರ ಟಿ.ಪಿ. ರಮೇಶ್, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2014ರಲ್ಲಿ ಮಡಿಕೇರಿಯಲ್ಲಿ ನಡೆದಾಗ ಅದರ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ನಾ.ಡಿ’ಸೋಜ ಅವರ ಹೆಸರಿನಲ್ಲಿ ಪರಿಷತ್ತು ದತ್ತಿ ಸ್ಥಾಪಿಸಿದ್ದು, ಕಥಾ ಸ್ಪರ್ಧೆ, ನಾಟಕ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪಿಯುಸಿ ಮಕ್ಕಳಿಗೆ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೀಗ ನಾಟಕ ಸ್ಪರ್ಧೆ ಏರ್ಪಾಡಿಸಲಾಗಿದೆ ಎಂದರು.
ಮುಂದಿನ ವರ್ಷ ಎಲ್ಲರ ಅಪೇಕ್ಷೆಯಂತೆ ಮಕ್ಕಳ ನಾಟಕೋತ್ಸವವನ್ನು ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಏರ್ಪಡಿಸಲು ಪರಿಷತ್ತು ಅಧ್ಯಕ್ಷರೊಂದಿಗೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಫಲಿತಾಂಶ :: ಸಂತ ಮೈಕಲರ ಫ್ರೌಡ ಶಾಲೆಯ ‘ಪ್ರಜಾನಿಷ್ಠೆ’ ನಾಟಕ ತಂಡ ಪ್ರಥಮ ಬಹುಮಾನ, ಮಡಿಕೇರಿ ಸರಕಾರಿ ಫ್ರೌಡಶಾಲೆಯ ‘ಚೆನ್ನ ಭೈರದೇವಿ’ ನಾಟಕ ತಂಡ ದ್ವಿತೀಯ ಬಹುಮಾನ ಹಾಗೂ ಚೆಂಬು ಪ್ರೌಢ ಶಾಲೆಯ ‘ಭೂ ಕೈಲಾಸ’ ನಾಟಕ ತಂಡ ತೃತೀಯ ಬಹುಮಾನ ಪಡೆಯಿತು.
ತೀರ್ಪುಗಾರರಾಗಿ ಶಿಕ್ಷಕಿಯರಾದ ಜಯಲಕ್ಷ್ಮಿ, ಗೌತಮಿ, ಮತ್ತು ಸೌಮ್ಯ ಶೆಟ್ಟಿ ಕಾರ್ಯನಿರ್ವಹಿಸಿದರು.
ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ತೀರ್ಪುಗಾರರಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಪರಿಷತ್ತಿನ ಸಹಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ನಿರ್ದೇಶಕಿ ಹಾಗೂ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಉಪಸ್ಥಿತರಿದ್ದರು. ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಭಾರತಿ ರಮೇಶ್ ಕಾರ್ಯಕ್ರಮ ನಿರೂಪಿಸಿ, ಸರ್ವರನ್ನು ಸ್ವಾಗತಿಸಿದರು.
ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ, ಕ.ಸಾ.ಪ ಜಿಲ್ಲಾ ಸಮಿತಿಯ ಸದಸ್ಯ ಶ್ರೀಧರ್ ಹೂವಲ್ಲಿ, ಕ.ಸಾ.ಪ. ಸಿಬ್ಬಂದಿ ರೇಣುಕಾ ಶಿಕ್ಷಕರಾದ ಕುಂಬಗೌಡನ ರಂಜಿತ್ ಹಾಗೂ ಪತ್ರಕರ್ತ ರಂಜಿತ್ ಕವಲಪಾರ, ಇನ್ನಿತರರು ಉಪಸ್ಥಿತರಿದ್ದರು. ಸಂತ ಮೈಕಲರ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.