ಸೋಮವಾರಪೇಟೆ ಮಾ.6 NEWS DESK : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿರುವ ‘ಮಕ್ಕಳ ಸಾಹಿತ್ಯ ಸಂಭ್ರಮ’ 2ನೇ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ನಡೆಯಿತು.
ಒಟ್ಟು ನೂರು ಮಕ್ಕಳು ನಾಲ್ಕು ವಿಭಾಗಗಳಲ್ಲಿ ತಮಗೆ ನೀಡಿದ ಟಾಸ್ಕ್‍ಗಳನ್ನು ಅಂಜಿಕೆ, ಭಯವಿಲ್ಲದೆ ನಿರ್ವಹಿಸಿದರು. ನಾಟಕದ ವಿಭಾಗದಲ್ಲಿ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದಂತೆ, ಬಾಲ್ಯ ವಿವಾಹ, ನಾಯಿಯರೋದನೆ ಎಂಬ ಶೀರ್ಷಿಕೆ ಕೊಟ್ಟು ತಾವೇ ರಚಿಸಿ ಅಭಿನಯಿಸಿದರು.
ಕಥೆ ವಿಭಾಗದ ಮಕ್ಕಳು ಚಿತ್ರ ನೋಡಿ ಕಥೆ ಬರೆಯುವುದು, ಕಥೆಗೊಂದು ಸಾಲು, ಪದ ಆಧರಿಸಿ ಕತೆ ರಚಿಸುವ, ಮಕ್ಕಳ ಬದುಕಿನ ಘಟನೆ ಆಧಾರಿತ ಕಥಾ ರಚನೆ, ಕಡ್ಡಿಗೊಂಬೆ ಮೂಲಕ ಕಥೆ ಕಟ್ಟುವುದು ಹೀಗೆ ಹಲವು ಬಗೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕವಿತೆ ವಿಭಾಗದಲ್ಲಿ ಪ್ರಾಸ ಪದ ಬಳಸಿ ಕವಿತೆ, ಚಿತ್ರ ಬಳಸಿ ಕವಿತೆ, ಸಾಲಿಗೆ ಸಾಲು ಕವಿತೆ, ನಮ್ಮನೆ ಹಾಡು ಹೀಗೆ ಅನೇಕ ಮಾದರಿಯಲ್ಲಿ ಕವನ ಕಟ್ಟಿದರು.
ಸಾಹಿತಿಯಾದ ನ.ಲ ವಿಜಯ ಅವರು ತಮ್ಮ ವೆಲ್ಡಿಂಗ್ ಶಾಪ್‍ಗೆ ಬಂದ ಶಿಬಿರಾರ್ಥಿಗಳಿಗೆ ಸ್ವಯಂ ಉದ್ಯೋಗದ ಮಾಹಿತಿ ನೀಡಿದರು. ತಂತ್ರಜ್ಞಾನ ಉಪಯೋಗಿಸಿಕೊಂಡು ದುಡಿದು ಹಣ ಸಂಪಾದಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಅಂಧ ದಂಪತಿಗಳಾದ ರೂಪ ಪರಮೇಶ್ ಹಾಗೂ ವಕೀಲರಾದ ಬಿ.ಜೆ.ದೀಪಕ್ ಸಂದರ್ಶನ ಮಾಡಿ ಮಾಹಿತಿ ಪಡೆದರು. ಪುಸ್ತಕ ಓದು ವಿಭಾಗದ ಮಕ್ಕಳು ವಿವಿಧ ಪುಸ್ತಕಗಳನ್ನು ಓದಿ ಅದರ ಕುರಿತ ಚಿಕ್ಕ ಪುಸ್ತಕ ರಚನೆ ಮಾಡಿದರು.
ಕಾರ್ಯಕ್ರಮ ಜಿಲ್ಲಾ ಸಂಯೋಜಕಿ ಸುಮನ ಮ್ಯಾಥ್ಯೂ, ಸಹ ಸಂಪನ್ಮೂಲ ವ್ಯಕ್ತಿಗಳಾದ ಎಲ್.ಎಂ.ಪ್ರೇಮ, ಟಿ.ಎಸ್.ವೆಂಕಟೇಶ್, ಭಾರತಿ, ಅಜಿತ್ ಕುಮಾರ್, ಪುಷ್ಪಲತಾ, ಬಸವರಾಜು ಬಡಿಗೇರಿ, ಪದ್ಮಾವತಿ, ರಂಗಸ್ವಾಮಿ, ಲೀಲಾವತಿ, ಜಯಮ್ಮ, ಇಂದಿರಾ, ಕೃಷ್ಣಪ್ಪ, ರತೀಶ್, ಗಣೇಶ್ ಮತ್ತಿತರು ಕಾರ್ಯನಿರ್ವಹಿಸಿದರು.









