ಮಡಿಕೇರಿ ಮಾ.6 NEWS DESK : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಆದ್ಮಿ ಪಾರ್ಟಿ ವತಿಯಿಂದ ಜಿಲ್ಲೆಯ ಪ್ರತಿ ಗ್ರಾಮ ಮತ್ತು ಗ್ರಾ.ಪಂ ವ್ಯಾಪ್ತಿಯಲ್ಲಿ “ಬೈ ಬೈ ಮೋದಿ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ 10 ವರ್ಷಗಳಲ್ಲಿ ನಿರಂತರ ಬೆಲೆ ಏರಿಕೆ, ಆಹಾರ ವಸ್ತುಗಳ ಮೇಲೆ ತೆರಿಗೆ ಹೊರೆ, ದೇಶದ ಯುವ ಪೀಳಿಗೆಯನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ದೇಶದ ಮೇಲಿನ ಸಾಲ ಹೆಚ್ಚಾಗಿರುವುದು ಸೇರಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ನಂತರದ ಬೆಲೆ ಏರಿಕೆಯ ಸುನಾಮಿ ಮಧ್ಯಮ ವರ್ಗದವರನ್ನು ಬಡತನ ರೇಖೆಗೆ ದೂಡಿದೆ. ಬಡವರು ಜೀವನ ನಡೆಸಲು ಹರಸಾಹಸ ಪಡಬೇಕಾಗಿದೆ. ದೇಶದ ಶೇ.70ರಷ್ಟು ಜನರ ಆದಾಯ ರೂ.10 ಸಾವಿರಗಿಂತ ಕಡಿಮೆ ಇದೆ. ಪ್ರಧಾನಿ ಮೋದಿ ಸರ್ಕಾರದ ಆರ್ಥಿಕ ನೀತಿ ಜನ ಸಾಮಾನ್ಯರ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರದ ವಿರುದ್ಧ ಮತ್ತು ಜನಪರವಾಗಿ ಹೋರಾಟ ನಡೆಸಲು ಆಮ್ ಆದ್ಮಿ ಪಾರ್ಟಿ ಮುಂದಾಗಿದ್ದು, “ಬೈ ಬೈ ಮೋದಿ” ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಭೋಜಣ್ಣ ಸೋಮಯ್ಯ ಮನವಿ ಮಾಡಿದ್ದಾರೆ.
ಮಾ.10 ರಂದು ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ “ಬೈ ಬೈ ಮೋದಿ” ಎಂದು ಬರೆದು ಕೇಂದ್ರ ಸರ್ಕಾರದ ವಿರುದ್ಧ ಪ್ರದರ್ಶನ ಮಾಡಬೇಕು. ಇಂಡಿಯಾ ಒಕ್ಕೂಟದ ಇತರೆ ಮಿತ್ರ ಪಕ್ಷಗಳು ಕೂಡ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಕೋರಿದ್ದಾರೆ.









