ವಿರಾಜಪೇಟೆ ಮಾ.6 NEWS DESK : ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಆರ್ವತೋಕ್ಲು ಹಾಗೂ ಈಚೂರು ಸೇರಿದಂತೆ ಸುತ್ತಮುತ್ತಲ ಈ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಎಂದು ಕರೆಯಲ್ಪಡುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಕೊಡಿಮರ ನಿಲ್ಲಿಸುವ ಮೂಲಕ 9 ದಿನಗಳ ಹಬ್ಬಕ್ಕೆ ಚಾಲನೆ ನೀಡಗಿದ್ದು, ದೇವರ ಅವಭೃತ ಸ್ನಾನದ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
ಕುಂದಾ ಮುಗುಟಗೇರಿ ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನ ಸಮೀಪದ ಅಂಬಲದಲ್ಲಿ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರುವತೋಕ್ಲು ಹಾಗೂ ಈಚೂರು ಸೇರಿದಂತೆ ಆರು ಊರುಗಳ ತಕ್ಕಮುಖ್ಯಸ್ಥರು ಶ್ರೀ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರಲಾಗಿದ್ದ ದವಸ-ಧಾನ್ಯಗಳನ್ನು ಎತ್ತು ಪೊರಾಟದ ಮೂಲಕ ದೇವಾಲಯದಕ್ಕೆ ತರಲಾಯಿತು.
ಚೆಂಡೆ ಮದ್ದಳೆ ಹಾಗೂ ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಎತ್ತು ಪೊರಾಟವನ್ನು ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆರು ಊರುಗಳಿಂದ ತರಲಾಗಿದ್ದ ದವಸಧಾನ್ಯಗಳನ್ನು ದೇವಾಲಯಕ್ಕೆ ಅರ್ಪಿಸಿದರು.
ನಂತರ ನೆರ್ಪು ಪ್ರಯುಕ್ತ ವಿಶೇಷ ಪೂಜೆ ನಡೆದು ದೇವರ ಉತ್ಸವ ಮೂರ್ತಿಯನ್ನು ಹೊತ್ತು ವಿವಿಧ ಪೂಜಾವಿಧಿ ವಿಧಾನಗಳೊಂದಿಗೆ ಚೆಂಡೆ ವಾದ್ಯಕ್ಕೆ ಹೆಜ್ಜೆ ಹಾಕಲಾಯಿತು. ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು.
ದೇವರ ಅವಭೃತ ಸ್ನಾನ (ದೇವಕುಳಿಪೊ) ಪ್ರಯುಕ್ತ ಶ್ರೀ ಈಶ್ವರ ದೇವರ ಆಭರಣಗಳನ್ನು ಚೆಂಡೆ ಮದ್ದಳೆಯೊಂದಿಗೆ ತಕ್ಕಮುಖ್ಯಸ್ಥರು ಕೊಂಡೊಯ್ದು ಹತ್ತಿರದಲ್ಲಿರುವ ದಬ್ಬೆಚಮ್ಮ ದೇವಸ್ಥಾನದಲ್ಲಿ (ಪಾರ್ವತಿ) ಪಾರ್ವತಿ ದೇವಿಗೆ ತೊಡಿಸಿ ಅಲಂಕಾರ ಮಾಡುವ ಮೂಲಕ ಸಾಂಪ್ರದಾಯಿಕ ಅವಭೃತ ಸ್ನಾನಕ್ಕೆ ಚಾಲನೆ ನೀಡಲಾಯಿತು.
ಸಂಜೆ ದೇವರ ಅವಭೃತ ಸ್ನಾನಕ್ಕೆ ಉತ್ಸವ ಮೂರ್ತಿಯನ್ನು ಹೊತ್ತು ಹತ್ತಿರದ ದೇವರ ಕೆರೆಗೆ ತೆರಳಿ ಅವಭೃತ ಸ್ನಾನದ ಬಳಿಕ ದೇವರ ಉತ್ಸವ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಚೆಂಡೆ ಮದ್ದಳೆ ಹಾಗೂ ಸಾಂಪ್ರದಾಯಿಕ ಕೊಡವ ವಾಲಗದೊಂದಿಗೆ ಹಾಗೂ ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ದೇವಸ್ಥಾನದಲ್ಲಿ 11ಸುತ್ತು ಪ್ರದಕ್ಷಿಣೆ ಹಾಕಿ ಚಂಡೆಯ ನಾದಕ್ಕೆ ಉತ್ಸವ ಮೂರ್ತಿಯನ್ನು ಹೊತ್ತವರು ಹೆಜ್ಜೆ ಹಾಕಿದರು.
ಈ ಸಂದರ್ಭ ಭಕ್ತಾದಿಗಳು ಹರಕೆ ಕಾಣಿಕೆಗಳನ್ನು ಅರ್ಪಿಸಿದರು. ಮಹಾಪೂಜೆಯ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಿತು.









