ಮಡಿಕೇರಿ ಮಾ.6 NEWS DESK : ಅಪಘಾತದಿಂದ ಹಾನಿಗೊಳಗಾದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಮಾ.8 ರಂದು ಮರುಸ್ಥಾಪನೆ ಮಾಡಲಾಗವುದೆಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ತಿಂಗಳ ಹಿಂದೆ ಜನರಲ್ ತಿಮ್ಮಯ್ಯ ವೃತ್ತಕ್ಕೆ ಕೆಎಸ್‍ಆರ್‍ಟಿ ಬಸ್ ಡಿಕ್ಕಿಪಡಿಸಿ ಹಾನಿಯಾಗಿದ್ದ ಪ್ರತಿಮೆಯನ್ನು ದುರಸ್ತಿ ಪಡಿಸಲಾಗಿದ್ದು, ಮಾ.8 ರಂದು ಜಿಲ್ಲಾಡಳಿತ ಹಾಗೂ ನಗರಸಭೆಯ ಸಹಕಾರದೊಂದಿಗೆ ಪ್ರತಿಮೆಯನ್ನು ಮರು ಸ್ಥಾಪನೆ ಮಾಡಲಾಗುವುದೆಂದರು.
ಬೆಳಿಗ್ಗೆ 6.30ಕ್ಕೆ ಮೈಸೂರಿನಿಂದ ಪ್ರತಿಮೆ ಹೊರಡಲಿದ್ದು, ಕುಶಾಲನಗರದಲ್ಲಿ ಭವ್ಯ ಸ್ವಾಗತ ಕೋರಲಾಗುವುದು. ಇದೇ ಸಂದರ್ಭ ತಿಮ್ಮಯ್ಯ ಅವರ ಮಾಹಿತಿ ಇರುವ ಸ್ತಬ್ಧಚಿತ್ರ ಹಾಗೂ ಬೈಕ್ ಮತ್ತು ಕಾರು ಜಾಥಾ ನಡೆಯಲಿದೆ ಎಂದರು.
ನಂತರ ಮಡಿಕೇರಿಯ ಕಾರ್ಯಪ್ಪ ವೃತ್ತದಿಂದ ಗೌರವಯುತ ಮೆರವಣಿಗೆಯ ಮೂಲಕ ತಿಮ್ಮಯ್ಯ ಅವರ ಪ್ರತಿಮೆಯನ್ನು ಕೊಡವ ಸಾಂಪ್ರದಾಯಿಕ ಉಡುಪು, ವಾಲಗದೊಂದಿಗೆ ಜನರಲ್ ತಿಮ್ಮಯ್ಯ ವೃತ್ತಕ್ಕೆ ತಂದು ಅಪರಾಹ್ನ 12 ಗಂಟೆಗೆ ಮಾಜಿ ಸಚಿವ ಎಂ.ಸಿ.ನಾಣಯ್ಯ ಮುಂದಾಳತ್ವದಲ್ಲಿ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭ ಶಾಸಕರು, ಜಿಲ್ಲಾಧಿಕಾರಿ, ಮಾಜಿ ಸೈನಿಕರು, ಕೊಡವ ಸಮಾಜಗಳ ಪ್ರಮುಖರು, ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು, ಜನರಲ್ ತಿಮ್ಮಯ್ಯ ಶಾಲೆಯ ವಿದ್ಯಾರ್ಥಿಗಳು, ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಗರದಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಹಾನಿಗೊಳಗಾದ ಪ್ರತಿಮೆಯನ್ನು ಮೈಸೂರಿನ ಶಿಲ್ಪಕಲಾ ಅಕಾಡೆಮಿಗೆ ರವಾನಿಸಿ ಪ್ರತಿಮೆಯನ್ನು ದುರಸ್ತಿಗೊಳಿಸಲು ಹಾಗೆಯೇ ಹಾನಿಗೊಳಗಾಗಿದ್ದ ವೃತ್ತವನ್ನೂ ಸಹ ದುರಸ್ತಿಗೊಳಿಸಲು ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಕ್ರಮ ವಹಿಸಲಾಗಿತ್ತು ಪ್ರಸ್ತುತ ಹಾನಿಗೊಳಗಾದ ಪ್ರತಿಮೆ ಮತ್ತು ಪ್ರತಿಷ್ಠಾಪನಾ ವೃತ್ತವೂ ಸಹ ದುರಸ್ತಿಯಾಗಿ ಪುನರ್ ಸ್ಥಾಪನೆಗೆ ಸಿದ್ಧವಾಗಿರುತ್ತದೆ. ಈ ಕಾರ್ಯವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು, ನಗರಸಭೆ, ಕೆ.ಎಸ್.ಆರ್.ಟಿ.ಸಿ ಮತ್ತು ಕೊಡವ ಸಮಾಜದ ಸಹಕಾರದೊಂದಿಗೆ ನಿರ್ವಹಿಸಲಾಗಿದೆ.
ಅದರಂತೆ ಕೆಎಸ್‌ಆರ್‌ಟಿಸಿ ಯ ರೂ.4 ಲಕ್ಷ ಸೇರಿದಂತೆ ಒಟ್ಟು ರೂ.17 ಲಕ್ಷ ವೆಚ್ಚದಲ್ಲಿ ಜನರಲ್ ತಿಮ್ಮಯ್ಯ ವೃತ್ತಕ್ಕೆ ವೈಜ್ಞಾನಿಕ ರೂಪ ಹಾಗೂ ತಿಮ್ಮಯ್ಯ ಅವರ ಪ್ರತಿಮೆಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾದ ಕಾಳಚಂಡ ಅಪ್ಪಣ್ಣ, ಕೇಕಡ ವಿಜು ದೇವಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು.








