ಮಡಿಕೇರಿ ಮಾ.6 NEWS DESK : ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ದೇವಸ್ಥಾನಗಳ ಮಹಾಸಂಘದ ಪ್ರಮುಖರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಮಹಾಸಂಘದ ಸಂಯೋಜಕ ವಿಜಯ್ ಕುಮಾರ್, ರಾಜ್ಯ ಸರ್ಕಾರ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ 1997 ಕ್ಕೆ ಮತ್ತಷ್ಟು ತಿದ್ದುಪಡಿಯನ್ನು ಮಾಡಿದೆ. ಈ ತಿದ್ದುಪಡಿಯಲ್ಲಿ ಹಲವಾರು ದೋಷಗಳಿದ್ದು, ಅವುಗಳು ದೇವಾಲಯಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ಈ ಕಲಂಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಹೊಸೂರು ದೇವಾಲಯ ಸಮಿತಿಯ ಹೊಸೂರು ಧರ್ಮಜ, ಕುಶಾಲನಗರ ಮುತ್ತಪ್ಪ ದೇವಾಲಯದ ಪವನ್ ಬಿದ್ದಪ್ಪ, ಕುಶಾಲನಗರ ಸಾಯಿ ದೇವಾಲಯದ ಓಬಲ್ ರೆಡ್ಡಿ, ಮಡಿಕೇರಿಯ ಶ್ರೀಚೌಡೇಶ್ವರಿ ದೇವಾಲಯದ ಜಗದೀಶ್, ಗಜಾನನ, ಕನ್ನಿಕಾ ಪರಮೇಶ್ವರಿ ದೇವಾಲಯದ ಯೋಗೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









