ನಾಪೋಕ್ಲು ಮಾ.7 NEWS DESK : ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತಜನ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ದೇವಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಮಾತನಾಡಿ, ವರ್ಷಕ್ಕೊಮ್ಮೆ ನಡೆಯುವ ಮಹಾಸಭೆಗೆ ಸದಸ್ಯರು ಎಲ್ಲರೂ ಹಾಜರಾಗಬೇಕು. ಅಭಿವೃದ್ಧಿಗೆ ಪೂರಕವಾದ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಸಂಘದ ನಿರ್ದೇಶಕ ಕಲಿಯಂಡ ಹ್ಯಾರಿಮಂದಣ್ಣ ಮಾತನಾಡಿ, ಭಕ್ತರ ಹಣದಲ್ಲಿ ಭಕ್ತ ಜನ ಸಂಘ ದೇವಾಲಯದ ಅಭಿವೃದ್ಧಿ ಕಾರ್ಯ ಮಾಡಿದ್ದು, ಮುಜರಾಯಿ ಇಲಾಖೆಯೊಂದಿಗೆ ಭಕ್ತ ಜನ ಸಂಘ ಸೇರಿಕೊಂಡು ದೇವಾಲಯದ ಅಭಿವೃದ್ಧಿ ಆಗಬೇಕು ಎಂದರು.
ಸದಸ್ಯ ಜಿ.ರಾಜೇಂದ್ರ ಮಾತನಾಡಿ, ಹಿಂದಿನ ವಾರ್ಷಿಕ ಮಹಾಸಭೆಯಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಮರಳಿ ಪಡೆಯಲು ಶಾಸಕರು ಮುಖ್ಯಮಂತ್ರಿಗಳೊಂದಿಗೆ ವ್ಯವಹರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ಬಗ್ಗೆ ಏನು ಬೆಳವಣಿಗೆಗಳಾಗಿವೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಎಲ್ಲಾ ತಕ್ಕ ಮುಖ್ಯಸ್ಥರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ದೇವಾಲಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಟ್ರಸ್ಟಿನ ಅಗತ್ಯವಿದೆ. ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯದ ಟ್ರಸ್ಟ್ ನಂತೆ ಇಗ್ಗುತ್ತಪ್ಪ ದೇವಾಲಯಕ್ಕೂ ಟ್ರಸ್ಟ್ ರಚನೆ ಆಗಲಿ. ಆಸಕ್ತಿ ಇರುವವರು ಟ್ರಸ್ಟ್ ಸದಸ್ಯರಾಗಿ ಅಭಿವೃದ್ಧಿಗೆ ಕೈಜೋಡಿಸಲಿ. ಆದರೆ ಅದು ರಾಜಕೀಯ ರಹಿತವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಭಕ್ತರು ಇತರ ಅರ್ಚಕರನ್ನು ಕರೆದುಕೊಂಡು ಬಂದರೆ ದೇವಾಲಯದಲ್ಲಿ ಪೂಜೆಗೆ ಅವಕಾಶ ನೀಡಬಾರದು ಎಂದು ಬೊಳಿಯಾಡಿರ ಸಂತು ಸುಬ್ರಮಣಿ ಸಲಹೆ ನೀಡಿದರು. ಒಂದು ಬಾರಿ ತುಲಾಭಾರಕ್ಕೆ ಬಳಸಿದ ಅಕ್ಕಿಯನ್ನು ಮರುಬಳಕೆ ಮಾಡಬಾರದು ಎಂದು ಪರದಂಡ ಸದಾ ನಾಣಯ್ಯ ಸೂಚಿಸಿದರು.
ಕನಿಯರ ನಾಣಯ್ಯ ಮಾತನಾಡಿ, ಹುತ್ತರಿ ಕದಿರು ತೆಗೆಯುವ ಗದ್ದೆಯ ವಿಷಯವಾಗಿ ಸಂಬಂಧಿಸಿದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ , ತಕ್ಕರಾದ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ ದೇವಾಲಯದ ಅಭಿವೃದ್ಧಿ ಮುಖ್ಯ ಎಲ್ಲರೂ ಭಕ್ತ ಸಂಘಕ್ಕೆ ಸಹಕಾರ ನೀಡಬೇಕು. ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ತುಲಾಭಾರ ಸೇವೆ ವಿಶಿಷ್ಟವಾದದ್ದು. ಜಾತಿ ಮತ ಭೇದವಿಲ್ಲದೆ ಎಲ್ಲ ಜನಾಂಗದವರಿಗೆ ತುಲಾಭಾರ ಸೇವೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಅಭಿವೃದ್ಧಿಗೆ ಭಕ್ತಜನರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಯುವಜನರು ಮುಂದಕ್ಕೆ ಬರಬೇಕಾಗಿದೆ. ಸ್ವಜನ ಪಕ್ಷಪಾತ, ಸ್ವಹಿತಾಸಕ್ತಿ ಬದಿಗೊತ್ತಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸುವ ಆಡಳಿತ ಮಂಡಳಿ ರಚಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ 15 ವರ್ಷಗಳಿಂದ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು ಅಭಿವೃದ್ಧಿ ಕೈಗೊಂಡ ಸಮಗ್ರ ಮಾಹಿತಿ ತಿಳಿಸಿದರು. ನೂತನ ಸಮಿತಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ನೂತನ ಸಮಿತಿ ಶಾಸಕರ ಅಭಿಪ್ರಾಯ ಪಡೆದು ಮುನ್ನಡೆಯಬೇಕು ಎಂದರು.
ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಪಾಂಡ0ಡ ನರೇಶ್, ಬಾಚಮಂಡ ಲವ ಚಿನ್ನಪ್ಪ ಉದಿಯಂಡ ಪಮ್ಮಯ್ಯ, ಡಾ.ಸಣ್ಣುವಂಡ ಕಾವೇರಪ್ಪ, ಕಂಬೆಯoಡ ಬೊಳ್ಳಪ್ಪ, ಉದಿಯಂಡ ಸುರನಾಣಯ್ಯ, ಕಲಿಯಂಡ ಸುನಂದ ನಾಟೋಳ0ಡ ದಿಲೀಪ್, ಕಲಿಯಂಡ ಸಂಪನ್ ಅಯ್ಯಪ್ಪ, ಅಂಜಪರವಂಡ ಕುಶಾಲಪ್ಪ, ಕೋಡಿಮಣಿಯಂಡ ಸುರೇಶ್, ಬಡಕಡ ಬೆಳ್ಯಪ್ಪ, ಅನ್ನಾಡಿಯಂಡ ದಿಲೀಪ್,ಚೋಯಮಾಡಂಡ ಹರೀಶ್,ಕಾಂಡಂಡ ಚರ್ಮಣ್ಣ ಮತ್ತಿತರರು ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಲಹೆ ಸೂಚನೆಯನ್ನು ನೀಡಿದರು.
ಸಂಘದ ಕಾರ್ಯದರ್ಶಿ ಬೊಳಂದಂಡ ಲಲಿತ ನಂದಕುಮಾರ್ ಹಿಂದಿನ ವರ್ಷದ ವಾರ್ಷಿಕ ವರದಿ ತಕ್ಕ ಪತ್ರಗಳನ್ನು ಮಂಡಿಸಿದರು.
ಕೋಟಿಮಣಿಯoಡ ಭೂಪಯ್ಯ ಪ್ರಾರ್ಥಿಸಿ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ ಸ್ವಾಗತಿಸಿದರು. ಖಜಾಂಚಿ ನಂಬಡಮಂಡ ಸುಬ್ರಮಣ್ಯ ವಂದಿಸಿದರು.
ನೂತನ ಸಮಿತಿ:
ಈ ಸಂದರ್ಭ ಮಹಾಸಭೆಯಲ್ಲಿ 15 ಮಂದಿ ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಯವಕಪಾಡಿಯ ಅಂಜಪರವಂಡ ಕುಶಾಲಪ್ಪ, ನಾಲಡಿಯ ಪರದಂಡ ಸುಮನ್ ಸುಬ್ರಮಣಿ, ಪರದಂಡ ನಾಣಯ್ಯ, ಕೆಲೇಟಿರ ರಂಜನ್ ಅಪ್ಪಚ್ಚು, ಕಲಿಯಂಡ ಗಿರೀಶ್, ಅಲ್ಲಾರಂಡ ಸನ್ನು ಅಯ್ಯಪ್ಪ, ಬಿಟ್ಟಿರ ಚೋಂದಮ್ಮ, ಕುಲ್ಲೇಟಿರ ಅರುಣ್ ಬೇಬ, ಕಾಂಡಂಡ ಸಜನ್ ಪೂವಯ್ಯ, ಕುಟ್ಟ೦ಜೇಟ್ಟಿರ ಬೋಪಣ್ಣ , ಅಪ್ಪಾರಂಡ ಮಂದಣ್ಣ ಅನ್ನಾಡಿಯಂಡ ದಿಲೀಪ್ ,ಕಲ್ಯಾಟ೦ಡ ಅಪ್ಪಣ್ಣ ಹಾಗೂ ಅರ್ಚಕ ಕುಶ ಭಟ್ ಅವರನ್ನು ಆಯ್ಕೆ ಮಾಡಲಾಯಿತು.
ವರದಿ : ದುಗ್ಗಳ ಸದಾನಂದ.