ಮಡಿಕೇರಿ ಮಾ.8 NEWS DESK : ಕೊಡಗಿನ ವೀರ ಪುತ್ರ, ವೀರಸೇನಾನಿ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಅತ್ಯಾಕರ್ಷಕವಾದ ಮತ್ತು ಯುವ ಸಮೂಹಕ್ಕೆ ಪ್ರೇರಣಾ ದಾಯಕವಾದ ನೂತನ ಪ್ರತಿಮೆಯನ್ನು ಶುಕ್ರವಾರದಂದು ನಗರದಲ್ಲಿ ಸಕಲ ಗೌರವಗಳೊಂದಿಗೆ ಮರುಸ್ಥಾಪನೆ ಮಾಡಲಾಯಿತು.
ಜಿಲ್ಲಾಡಳಿತ, ನಗರಸಭೆಯ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ನೂತನ ವೃತ್ತದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು, ಪುಷ್ಪನಮನದ ಮೂಲಕ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ಅನಾವರಣಗೊಳಿಸಿದರು.
ನೂತನ ಪ್ರತಿಮೆ ಅನಾವರಣದ ಸಂದರ್ಭ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭ ಐದು ದಶಕಗಳ ಹಿಂದೆ ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಕಾರಣರಾಗಿದ್ದ ಮಾಜಿ ಸಚಿವ ಎಂ.ಸಿ. ನಾಣಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ, ಫೀ.ಮಾ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ. ಬಿ.ಎ.ಕಾರ್ಯಪ್ಪ ಒಳಗೊಂಡಂತೆ ಮಾಜಿ ಸೈನಿಕರು, ಸಾರ್ವಜನಿಕರು ಜ.ತಿಮ್ಮಯ್ಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
‘ನಾನು ಭಾರತೀಯ ಎನ್ನುವುದು ಮೊದಲು’ : ವೀರ ಸೇನಾನಿಯ ಪ್ರತಿಮೆ ಅನಾವರಣಗೊಳಿಸಿದ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಮಾತನಾಡಿ, ಜನರಲ್ ಕೆ.ಎಸ್. ತಿಮ್ಮಯ್ಯ ಅವರು ತಮ್ಮ ಸೈನ್ಯದ ಅತ್ಯಪೂರ್ವವಾದ ಕಾರ್ಯ ವೈಖರಿಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಾದರಗಳನ್ನು ಪಡೆದ ಮಹಾನ್ ಸೇನಾನಿಯಾಗಿದ್ದಾರೆ. ಬದುಕಿನುದ್ದಕ್ಕೂ ಅವರು ‘ನಾನು ಭಾರತೀಯ ಎನ್ನುವುದ ಮೊದಲು. ಉಳಿದೆಲ್ಲವೂ ನಂತರದ್ದು’ ಎನ್ನುವ ಮಹಾನ್ ಚಿಂತನೆಯನ್ನು ಹೊಂದಿದ್ದರು. ಅಂತಹ ಉದಾತ್ತ ಚಿಂತನೆ ಯುವ ಸಮೂಹದ್ದಾಗಿರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ವೀರಸೇನಾನಿ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಉದಾತ್ತ ಚಿಂತನೆಗಳು ಯುವ ಸಮೂಹಕ್ಕೆ ಪ್ರೇರಣಾದಾಯವಾಗಿರಲಿ ಎನ್ನುವ ಚಿಂತನೆಗಳಡಿ 1973 ರಲ್ಲಿ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಎಂ.ಸಿ. ನಾಣಯ್ಯ ಅವರು ವೀರಸೇನಾನಿಯ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರೆಂದು ಸ್ಮರಿಸಿದರು.
ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಮೇ.ಜ.ಬಿ.ಎ. ಕಾರ್ಯಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರೊಬ್ಬ ಮಹಾನ್ ಸೈನಿಕರಾಗಿದ್ದವರೆಂದು ಬಣ್ಣಿಸಿ, ಮುಂದಿನ ಜನ್ಮವೊಂದಿದ್ದರೆ ಜ.ತಿಮ್ಮಯ್ಯ ಅವರ ಕೈಗೆಳಗೆ ಕಾರ್ಯನಿರ್ವಹಿಸುವ ಭಾಗ್ಯ ತನಗೆ ದೊರಕಲೆಂದು ಮನದುಂಬಿ ನುಡಿದರು.
ಮಾಜಿ ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, 1973 ರಲ್ಲಿ ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರು ಅನಾವರಣಗೊಳಿಸಿದ್ದು, ಆ ಸಂದರ್ಭ ಕೇಂದ್ರ ಸಚಿವರಾಗಿದ್ದ ಎಸ್.ಎಂ. ಕೃಷ್ಣ ಪಾಲ್ಗೊಂಡುದನ್ನು ಸ್ಮರಿಸಿದರಲ್ಲದೆ, ಅಂದು ರಾಜ್ಯ ಸರ್ಕಾರ ಅಸ್ತ್ತಿತ್ವದಲ್ಲೆ ಇರಲಿಲ್ಲ. ಅಂತಹ ಸಂದರ್ಭವೂ ಅಂದಿನ ರಾಜ್ಯಪಾಲ ಧರ್ಮವೀರ ಅವರು ಪ್ರತಿಮೆ ಸ್ಥಾಪನೆಗೆ 10 ಸಾವಿರ ನೆರವನ್ನು ನೀಡಿದ್ದನ್ನು ಸ್ಮರಿಸಿ, ಪ್ರತಿಮೆಯನ್ನು ಅಂದು ಮುಂಬೈನ ಶಿಲ್ಪಿ ವಾಗ್ ಅವರು 30 ಸಾವಿರ ರೂ.ಗಳಿಗೆ ನಿರ್ಮಿಸಿಕೊಟ್ಟುದನ್ನು ಸ್ಮರಿಸಿದರು.
ಇದೇ ಸಂದರ್ಭ ಜ.ತಿಮ್ಮಯ್ಯ ಅವರ ತಾಯಿ ಸೀತವ್ವ ಅವರು ಆ ಕಾಲದಲ್ಲೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ, ಕುಡಿಯುವ ನೀರಿನ ಉದ್ದೇಶಕ್ಕಾಗಿ ಇಂದಿನ ಮಹದೇವಪೇಟೆ ವಿಭಾಗದ 17 ಏಕರೆ ಜಾಗವನ್ನು ಉದಾರವಾಗಿ ನೀಡಿದ್ದರಲ್ಲದೆ, ಗೌಳಿಬೀದಿಯ ಸುಮಾರು 10 ಏಕರೆ ಜಾಗವನ್ನು ಅದೇ ಸಂದರ್ಭ ನೀಡಿ ಧರ್ಮಬೀರುವಾಗಿದ್ದರೆಂದು ತಿಳಿಸಿದರು.
ಮಾಜಿ ಎಂಎಲ್‍ಸಿ ಸುಜಾ ಕುಶಾಲಪ್ಪ ಮಾತನಾಡಿ, ಜ.ತಿಮ್ಮಯ್ಯ ಅವರು ದೇಶಕ್ಕೆ ಕೀರ್ತಿ ತಂಡ ವೀರ ಸೇನಾನಿಯಾಗಿದ್ದಾರೆ. ಅವರ ತತ್ತ್ವಾದರ್ಶ ನಮ್ಮೆಲ್ಲರಿಗೂ ಆದರ್ಶವಾಗಿದೆಯೆಂದರು.
ಜನರಲ್ ತಿಮ್ಮಯ್ಯ ವೃತ್ತವಾಗಿ ಪರಿಗಣಿಸಿ : ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಇರುವ ಈ ವೃತ್ತ ವೀರ ಸೇನಾನಿಯ ಹೆಸರಿನಲ್ಲೆ ಕರೆಯಲ್ಪಡುವಂತಾಗಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದೇಶ ಕಂಡ ಅಪ್ರತಿಮ ವೀರ ಸೇನಾನಿ ಜ.ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಯೊಂದಿಗೆ, ಈ ವೃತ್ತ ಅವರ ಹೆಸರಿನಲ್ಲೆ ಗುರುತಿಸಲ್ಪಡುವ ನಿಟ್ಟಿನಲ್ಲಿ ನಗರಸಭೆ ನಿರ್ಣಯವನ್ನು ಕೈಗೊಳ್ಳುವಂತೆ ಸಲಹೆಯನ್ನಿತ್ತರು.
ಜಿಲ್ಲಾಧಿಕಾರಿ ವೆಂಕಟ್ ರಾಜು ಅವರು ಮಾತನಾಡಿ, ವೀರಸೇನಾನಿಯ ಪ್ರತಿಮೆ ಮರು ಸ್ಥಾಪನೆಗೆ ಕಾರಣರಾದವರನ್ನು ಸ್ಮರಿಸಿದರಲ್ಲದೆ, ವೀರಸೇನಾನಿ ಜ.ತಿಮ್ಮಯ್ಯ ಅವರ ಪ್ರತಿಮೆ ಅನಾವರಣದ ಮೂಲಕ ಅವರ ಜೀವನ ಸಂದೇಶಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯನ್ನು ನೀಡುವಂತಾಗಲೆಂದು ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಜ.ತಿಮ್ಮಯ್ಯ ಅವರ ಪ್ರತಿಮೆಯನ್ನು ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿಪಡಿಸಿ ಸಜ್ಜುಗೊಳಿಸಲಾಗಿದ್ದು, ವೃತ್ತವನ್ನು 13.50 ಲಕ್ಷ ವೆಚ್ಚದಲ್ಲಿ ಮರು ನಿರ್ಮಿಸಲಾಗಿದೆ. ಭವಿಷ್ಯದ ದಿನಗಳಲ್ಲಿ ಈ ವೃತ್ತದಲ್ಲಿ ವಾಹನ ದಟ್ಟಟೆಗಳಿಂದ ತೊಂದರೆಯಾಗದ ರೀತಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಯಲ್ಲೆ ಸಿಸಿ ಟಿವಿಗಳ ಅಳವಡಿಕೆ ಮಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದು ಉಚಿತವೆಂದು ತಿಳಿಸಿದರು.
ಪ್ರತಿಮೆಗೆ ಭವ್ಯ ಸ್ವಾಗತ- ಮೈಸೂರಿನಿಂದ ಸಜ್ಜುಗೊಂಡು ಮಡಿಕೇರಿಗೆ ಇಂದು ಬೆಳಗ್ಗೆ 11.30 ಗಂಟೆಯ ಹೊತ್ತಿಗೆ ಫೀ.ಮಾ. ಕಾರ್ಯಪ್ಪ ವೃತ್ತಕ್ಕೆ ಆಗಮಿಸಿದ ಜ.ತಿಮ್ಮಯ್ಯ ಪ್ರತಿಮೆಯನ್ನು ಹೊತ್ತ ಪ್ರತಿಮ ಮರು ಸ್ಥಾಪನಾ ವಾಹನವನ್ನು ಶಾಸಕರಾದಿಯಾಗಿ, ವಿವಿಧ ಸಂಘ ಸಂಸ್ಥೆಗಳು ಗೌರವ ಪೂರ್ವಕವಾಗಿ ಸ್ವಾಗತಿಸಿದರು.
ಬಳಿಕ ವೀರಸೇನಾನಿಯ ಪ್ರತಿಮೆಯ ಮೆರವಣಿಗೆಯನ್ನು ಸಾಂಪ್ರದಾಯಿಕ ಕೊಂಬ್ ಕೊಟ್ಟ್ ವಾಲಗದೊಂದಿಗೆ ನೂತನ ವೃತ್ತದ ವರಗೆ ನಡೆಸಲಾಯಿತು. ಕೊಡವ ಉಡುಪಿನೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಜ.ತಿಮ್ಮಯ್ಯ ಶಾಲಾ ಎನ್‍ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಮಾಜಿ ಸೈನಿಕರು ಮೆರವಣಿಗೆಯಲ್ಲಿ ಸಾಗಿ ಬಂದುದು ವಿಶೇಷ. ಬೈಕ್ ಜಾಥವು ಗಮನ ಸೆಳೆಯಿತು.











