ಮಡಿಕೇರಿ ಮಾ.9 NEWS DESK : ನಾಪೋಕ್ಲುವಿನ ಚೆರಿಯಪಂಬುವಿನಲ್ಲಿ ನಿರಾಶ್ರಿತರು ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ಕಂದಾಯ ಇಲಾಖೆ ತೆರವು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದ್ದು, ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನಿರಾಶ್ರಿತರಿಗೆ ಆಗಿರುವ ನಷ್ಟವನ್ನು ಭರಿಸಬೇಕು ಎಂದು ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಾಶ್ರಿತರಿಗೆ ಬದಲೀ ವ್ಯವಸ್ಥೆ ಕಲ್ಪಿಸಿಕೊಡಬೇಕಾದ ಅಧಿಕಾರಿಗಳು, ಮಾನವೀಯತೆ ಮರೆತು ಗುಡಿಸಲುಗಳನ್ನು ನಾಶಪಡಿಸಿದ್ದಾರೆ. ಗುಡಿಸಲು ಕಳೆದುಕೊಂಡ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಮಾ.11 ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.
ನಾಪೋಕ್ಲುವಿನ ಚೆರಿಯಪರಂಬುವಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸುಮಾರು 18 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ನಿವಾಸಿಗಳಿಗೆ ಯಾವುದೇ ಮುನ್ನೆಚ್ಚರಿಕೆ ಅಥವಾ ನೋಟಿಸ್ ನೀಡದೆ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನಾಪೋಕ್ಲುವಿನ ಕಂದಾಯ ಅಧಿಕಾರಿಗಳು ಏಕಾಏಕಿ ಗುಡಿಸಲನ್ನು ಕಿತ್ತು ಹಾಕಿದ್ದಾರೆ. ಇದರಿಂದ ಮನೆಯಲ್ಲಿದ್ದ ಸಾಮಾಗ್ರಿಗಳಿಗೂ ಹಾನಿಯಾಗಿದೆ ಎಂದು ಆರೋಪಿಸಿದರು.
ಈ ಹಿಂದೆ ಇದ್ದ ಶೆಡ್‍ನ ಕಂಬಗಳು ಹಾಳಾದ ಪರಿಣಾಮ ಸಿಮೆಂಟ್ ಕಂಬಗಳನ್ನು ಹಾಕಿದ್ದಾರೆ. ಅದನ್ನು ಈಗ ನೂತನ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು 18 ಶೆಡ್‍ಗಳನ್ನು ಅಧಿಕಾರಿಗಳು ಸಂಪೂರ್ಣ ಹಾನಿ ಪಡಿಸಿದ್ದಾರೆ. ಕೊಡಗಿನಲ್ಲೇ ಹುಟ್ಟಿ ಬೆಳೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಸೇರಿದಂತೆ ಇನ್ನಿತರ ಕಡು ಬಡತನದಲ್ಲಿರುವ ನಿರಾಶ್ರಿತರು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅದೇ ವಿಳಾಸದ ಆಧಾರ್‍ಕಾಡ್, ರೇಷನ್ ಕಾರ್ಡ್, ಮತದಾರರ ಚೀಟಿ ಮಾತ್ರವಲ್ಲ ಎಲ್ಲಾ ಗುಡಿಸಲುಗಳಿಗೆ ಗ್ರಾ.ಪಂ ಜಲಜೀವನ್ ಮಿಷನ್ ವತಿಯಿಂದ ನೀರಿನ ಪೈಪ್ ಲೈನ್‍ಗಳನ್ನು ಕೂಡ ಅಳವಡಿಸಿಕೊಡಲಾಗಿದೆ. ಈ ಎಲ್ಲಾ ದಾಖಲಾತಿಗಳು ಇದ್ದರೂ ಅಧಿಕಾರಿಕಾರಿಗಳು ಕೆಲವರ ಕುಮ್ಮಕ್ಕಿನಿಂದ ಬಡವರ ಮೇಲೆ ದರ್ಪ ತೊರಿಸುವುದು ಸರಿಯಲ್ಲ ಎಂದರು.
ಚೆರಿಯಪರಂಬು ನಿವಾಸಿಗಳಾದ ಎಸ್.ಶಾಂತರಾಜು, ವೈ.ಎಸ್.ಪಾರ್ವತಿ, ವೈ.ಆರ್.ಸುನಿತಾ ಹಾಗೂ ಬಿ.ಹೆಚ್.ಶಂಕರ್ ಉಪಸ್ಥಿತರಿದ್ದರು.









