ಮಡಿಕೇರಿ ಮಾ.9 NEWS DESK : ಮಡಿಕೇರಿ ತಾಲ್ಲೂಕಿನ ಕೆ.ಪೆರಾಜೆ, ಆಲೆಟ್ಟಿ ದೊಡ್ಡಡ್ಕ, ಕಾಪುಮಲೆ, ಕುಂದಲಪಾಡಿ ಹಾಗೂ ಕುಂಬಳಚೇರಿ ಗ್ರಾಮ ವ್ಯಾಪ್ತಿಯ ರಸ್ತೆಯನ್ನು ತಕ್ಷಣ ಅಭಿವೃದ್ಧಿ ಪಡಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕೆ.ಪೆರಾಜೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪೆರಾಜೆ ಗ್ರಾಮದ ನಿವಾಸಿ ಕೆ.ಎಸ್.ವಿಜಯ ಕೃಷ್ಣ, 2020ರಲ್ಲಿ ಕೆ.ಪೆರಾಜೆ, ಆಲೆಟ್ಟಿ, ಕಾಪುಮಲೆ, ಕುಂದಲಪಾಡಿ ಹಾಗೂ ವಿಎಸ್‍ಎಸ್‍ಎನ್ ರಸ್ತೆಯನ್ನು ಸುಮಾರು 12 ಕಿ.ಮೀ ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ಆಗಿದೆ. ಅದರಂತೆ 2022-23ರ ಸಾಲಿನಲ್ಲಿ ನಬಾರ್ಡ್ ಯೋಜನೆಯಡಿ ಅಂದಾಜು ಮೊತ್ತ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಮ್ಮಿಕೊಳ್ಳಬೇಕಾಗಿತ್ತು. ಟೆಂಡರ್ ಮಂಜೂರಾತಿ ಆಗಿದ್ದರೂ ಇಲ್ಲಿಯವರೆಗೆ ಕಾಮಗಾರಿ ಆರಂಭವಾಗದೆ ಇರುವುದು ಖಂಡನೀಯ ಎಂದರು.
ಇದೇ ಜ.27ರಂದು ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ರಸ್ತೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಗಮನ ಸೆಳೆಯಲಾಗಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಹಸ್ತಾಂತರಗೊಂಡಿರುವ ಎಂಡಿಆರ್ ರಸ್ತೆಯ ನಾಮಫಲಕವನ್ನು ಅಳವಡಿಸಿ ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೆ ಮೌಖಿಕವಾಗಿ ಆದೇಶಿಸಿದ್ದರು. ಆದರೆ ಇಲ್ಲಿಯವರೆಗೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.
ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ ಅವರು, ನಿರ್ಲಕ್ಷ್ಯ ವಹಿಸಿದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದು ಖಚಿತವೆಂದರು.
ಕೆ.ಪೆರಾಜೆ, ಆಲೆಟ್ಟಿ, ಕೆಂಗಮೊಟ್ಟೆ, ದೊಡ್ಡಡ್ಕ, ಕಾಪುಮನೆ ಕುಂದಲಪಾಡಿ ಭಾಗದ ರಾಜ್ಯ ಹೆದ್ದಾರಿ ಮುಖ್ಯ ರಸ್ತೆಯಿಂದ 6 ಗ್ರಾಮಗಳಿಗೆ ತೆರಳುವ ರಸ್ತೆ ಎದುರು ಕಾಮಗಾರಿಯ ಮಾಹಿತಿಯನ್ನು ಒಳಗೊಂಡ ಬೃಹತ್ ಬ್ಯಾನರ್ ಅಳವಡಿಸಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಮತ್ತೋರ್ವ ನಿವಾಸಿ ಟಿ.ಬಿ.ಮುದ್ದಪ್ಪ ಮಾತನಾಡಿ, ರಸ್ತೆ ಡಾಂಬರೀಕರಣ ಕಾಣದೆ ಹಲವು ವರ್ಷಗಳೇ ಕಳೆದಿದೆ. ಈ ಗ್ರಾಮಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿದಿನ ಧೂಳು ಮಣ್ಣಿನಿಂದ ಕೂಡಿದ ರಸ್ತೆಯಲ್ಲಿ ಓಡಾಡುವಂತಾಗಿದೆ. ಆದ್ದರಿಂದ ರಸ್ತೆ ಕಾಮಗಾರಿಯನ್ನು ಮೂಲಸ್ಥಳದಲ್ಲೇ ಆರಂಭಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆರಾಜೆ ಗ್ರಾಮಸ್ಥರಾದ ಬಿ.ಎಲ್.ಶಿವರಾಂ, ಡಿ.ಬಿ.ಪ್ರಕಾಶ್, ಎನ್.ಕೆ.ಶರತ್ ಹಾಗೂ ದೊಡ್ಡಡ್ಕ ನಿವಾಸಿ ದೀನರಾಜು ಉಪಸ್ಥಿತರಿದ್ದರು.









