ಮಡಿಕೇರಿ ಮಾ.12 NEWS DESK : ಕೊಡಗಿನ ಜನರ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಎಂಆರ್‍ಐ ಸ್ಕ್ಯಾನಿಂಗ್ ಘಟಕವನ್ನು ಹಾಗೂ ತಂತ್ರಾಂಶವನ್ನು ಶಾಸಕ ಡಾ.ಮಂತರ್ ಗೌಡ ಅವರ ಪರಿಶ್ರಮದಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ಮಂಜೂರು ಮಾಡಲಾಗಿದೆ.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಅಧೀನ ಜಿಲ್ಲಾ ಆಸ್ಪತ್ರೆಗೆ ಸಾರ್ವಜನಿಕ – ಖಾಸಗಿ ಸಹಭಾಗಿತ್ವ ಎಂಆರ್‍ಐ ಸ್ಕ್ಯಾನಿಂಗ್ ಕೇಂದ್ರವನ್ನು ಹಾಗೂ ವೈದ್ಯಕೀಯ ಉಪಕರಣ ಮಂಜೂರು ಮಾಡುವ ಬಗ್ಗೆ ಶಾಸಕ ಡಾ.ಮಂತರ್ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಿದ್ದರು.
ಕೊಡಗು ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಸರ್ಕಾರಿ ಅಥವಾ ಖಾಸಗಿ ಸಂಸ್ಥೆ ಆಸ್ಪತ್ರೆಗಳಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಇಲ್ಲದೆ ಇರುವುದರಿಂದ ರೋಗಿಗಳು ಸ್ಕ್ಯಾನಿಂಗ್ ಗಾಗಿ ಇತರೆ ದೂರದ ಜಿಲ್ಲೆಗಳಾದ ಮೈಸೂರು, ಮಂಗಳೂರು, ಹಾಸನ, ಬೆಂಗಳೂರು ನಗರಗಳನ್ನು ಅವಲಂಬಿಸಲಾಗುತ್ತಿದ್ದು, ಎಂ.ಆರ್.ಐ ಸ್ಕ್ಯಾನಿಂಗ್ ಸೌಲಭ್ಯವಿಲ್ಲದೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ತೀವ್ರವಾದ ತೊಂದರೆಯಾಗುತಿತ್ತು.
ಇತ್ತೀಚೆಗೆ ಜರುಗಿದ 2023-24 ನೇ ಸಾಲಿನ ರಾಜ್ಯ ಆಯವ್ಯಯ ಎಲ್ಲಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾರ್ವಜನಿಕ – ಖಾಸಗಿ ಸಹಾಭಾಗಿತ್ವದಲ್ಲಿ ಎಂಆರ್‍ಐ ಸ್ಕ್ಯಾನಿಂಗ್ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಅದರಂತೆ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ 15 ಜಿಲ್ಲಾ ಆಸ್ಪತ್ರೆಗೆ ಎಂಆರ್‍ಐ ಮಂಜೂರಾಗಿದ್ದು ಕೊಡಗು ಜಿಲ್ಲೆಗೆ ಮಂಜೂರಾಗದೇ ಇದ್ದುದ್ದರಿಂದ ಶಾಸಕ ಡಾ.ಮಂತರ್ ಗೌಡ ಅವರು, ನಿರಂತರವಾಗಿ ಸರ್ಕಾರದ ಗಮನ ಸೆಳೆದು ಎಂಆರ್‍ಐ ಸ್ಕ್ಯಾನಿಂಗ್ ಕೇಂದ್ರ ಹಾಗೂ ತಂತ್ರಾಂಶವನ್ನು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಡಿಕೇರಿಯ ಅದೀನ ಜಿಲ್ಲಾ ಆಸ್ಪತ್ರೆಗೆ ಮಂಜೂರು ಮಾಡಿ ತರುವಲ್ಲಿ ಯಶಸ್ವಿಯಾಗಿದ್ದಾರೆ.









