ಸಕಲೇಶಪುರ ಮಾ.13 NEWS DESK : ಅನಿಲ ಸಾಗಾಟದ ಟ್ಯಾಂಕರ್ ವೊಂದು ಪಲ್ಟಿಯಾದ ಪರಿಣಾಮ ಅನಿಲ ಸೋರಿಕೆಯಾಗಿ ಆತಂಕ ಸೃಷ್ಟಿಯಾದ ಘಟನೆ ಬುಧವಾರ ಬೆಳಗ್ಗೆ ಶಿರಾಡಿಘಾಟ್ ರಸ್ತೆ ಎನ್‌ಎಚ್-75 ರಲ್ಲಿ ಡಬಲ್ ಕ್ರಾಸ್ ಬಳಿ ನಡೆದಿದೆ. ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಮಂಗಳೂರು-ಹಾಸನ-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ರಸ್ತೆಯಲ್ಲಿ ಕಳುಹಿಸಲಾಗುತ್ತಿದೆ. ಮಂಗಳೂರು ಧರ್ಮಸ್ಥಳಕ್ಕೆ ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಮಂಗಳೂರಿನಿಂದ ಹಾಸನ ಬೆಂಗಳೂರಿಗೆ ತೆರಳುವವರು ಗುಂಡ್ಯ ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಬಹುದಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು, ಮಂಗಳೂರಿನ ಎಮ್. ಆರ್. ಪಿ. ಎಲ್ ನಿಂದ ತಜ್ಞರ ತಂಡ ಆಗಮಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದ್ದು, ಟ್ಯಾಂಕರ್ ನ್ನು ತೆರವುಗೊಳಿಸಿದ ನಂತರವಷ್ಟೇ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










