ಮಡಿಕೇರಿ ಮಾ.13 NEWS DESK : ದೇಶದ ಒಕ್ಕೂಟ ವ್ಯವಸ್ಥೆಗೆ, ಬಲವರ್ಧನೆಗೆ ಮತ್ತು ಪ್ರಜಾಪ್ರಭುತ್ವದ ಮೌಲ್ಯವರ್ಧನೆಗೆ ಶ್ರೇಷ್ಠ ಸಂವಿಧಾನ ಸೂಕ್ತ ಅಡಿಪಾಯ ಹಾಕಿಕೊಟ್ಟಿದೆ ಎಂದು ಮಡಿಕೇರಿಯ ಆರ್.ಆರ್.ಆಸ್ಪತ್ರೆಯ ಖ್ಯಾತ ಮಕ್ಕಳ ತಜ್ಞ ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಭಾರತದ ಸಂವಿಧಾನದ ಬಗ್ಗೆ ವಿಚಾರ ಮಂಡನೆ ಹಾಗೂ 2022-23ನೇ ಸಾಲಿನಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅತಿ ಹೆಚ್ಚು ಫಲಿತಾಂಶ ಬರಲು ಕಾರಣಕರ್ತರಾದ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರಿಗೆ ಹಾಗೂ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂವಿಧಾನದ ಆಶಯಗಳ ಕುರಿತು ವಿಚಾರ ಮಂಡನೆ ಮಾಡಿದರು.
ಸಂವಿಧಾನ ಎನ್ನುವುದು ದೇಶದ ಜೀವ ಸಂಕುಲಗಳನ್ನು ರಕ್ಷಿಸಿ ಉತ್ತಮವಾದ ಬದುಕು ಕಟ್ಟಿಕೊಡುವ ಆಡಳಿತಾತ್ಮಕ ಕಾನೂನು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಲ್ಲುವ ಹಕ್ಕು ಮತ್ತು ಕರ್ತವ್ಯವನ್ನು ಅಳವಡಿಸುವ ಮೂಲಕ ಜವಾಬ್ದಾರಿಯುತ ಭಾರತವನ್ನು ನಿರ್ಮಿಸಿ ಕೊಡುವಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ಸಂವಿಧಾನ ರಚನಾ ಸಭೆ ಅಧ್ಯಕ್ಷರಾಗಿ ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸಿಕೊಟ್ಟ ಅಂಬೇಡ್ಕರ್ ಅವರು ಕಾನೂನಿನ ಎದುರು ಸರ್ವರು ಸಮಾನರು ಎಂಬುವುದನ್ನು ಪ್ರತಿಪಾದಿಸಿದ್ದಾರೆ. ಅಲ್ಲದೇ ಅನ್ಯಾಯಕ್ಕೆ ಒಳಗಾದವರನ್ನು ವಿಶೇಷ ಕಾನೂನಿನ ಮೂಲಕ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕಲು ಪ್ರೇರೆಪಿಸಿದ್ದಾರೆ. ಅವರ ವಿಚಾರಧಾರೆಗಳು ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಸಂವಿಧಾನ ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾತ್ರ ಸೀಮಿತವಾಗಿಲ್ಲ, ಅದನ್ನು ಎಲ್ಲರೂ ಅರಿತುಕೊಳ್ಳುವ ಅಗತ್ಯವಿದೆ. ಆ ಮೂಲಕ ಅವರನ್ನು ಸದಾ ಸ್ಮರಣೆ ಮಾಡುವಂತಾಗಬೇಕು ಎಂದು ತಿಳಿಸಿದರು.
ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಸಮಾಜ ಯಾವಾಗಲು ನೆನಪಿನಲ್ಲಿಟ್ಟುಕೊಳ್ಳುತ್ತದೆ. ದೇಶ ರಕ್ಷಣೆ ವಿಚಾರ ಬಂದಾಗ ವಿದ್ಯಾರ್ಥಿಗಳು ಸದಾ ಮುಂದಿರಬೇಕು. ಭಾರತದ ಪರಂಪರೆಯನ್ನು ಉಳಿಸಿಕೊಳ್ಳುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಮತ್ತು ಸಮಾಜಮುಖಿಯಾಗಿ ಬದುಕಬೇಕು. ಪ್ರಕೃತಿ ಉಳಿಸಿ ಬೆಳೆಸಬೇಕು, ನೀರಿನ ಮಹತ್ವವನ್ನು ಅರಿತು ಬದುಕುವುದು ನಮ್ಮ ಕರ್ತವ್ಯವಾಗಿದೆ ಎಂದು ಡಾ.ನವೀನ್ ಕುಮಾರ್ ಹೇಳಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಮಾತನಾಡಿ ಶಿಕ್ಷಣದ ಪ್ರಗತಿ ಭಾರತ ರತ್ನ ಡಾ.ಬಿ.ಆರ್.ಅಬೇಂಡ್ಕರ್ ಅವರ ಕನಸಿನ ರೂಪವಾಗಿದೆ. ಬಡತನದಲ್ಲಿದ್ದರೂ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದ್ದಾರೆ ಎಂದರು.
ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ರಚನೆ ಮಾಡಲಾಗಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂಬ ನಿಟ್ಟಿನಲ್ಲಿ ಸಂಘಟನೆಯ ಮೂಲಕ ಕಳೆದ 10 ವರ್ಷಗಳಿಂದ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದೆ. ಇದು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿ ಹೆಚ್ಚಿನ ಫಲಿತಾಂಶಕ್ಕೆ ಪ್ರೇರಣೆ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ನಂತರ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಮತ್ತು ಶಿಕ್ಷಕರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ, ದಲಿತ ಸಂಘರ್ಷ ಸಮಿತಿ ಶಿಕ್ಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದೆ. ಸಂಘಟನೆಯ ಸಾಮಾಜಿಕ ಚಿಂತನೆ ಮತ್ತು ಶಿಕ್ಷಣದ ಬಗ್ಗೆ ಅದಕ್ಕಿರುವ ಕಾಳಜಿ ಶ್ಲಾಘನೀಯ ಎಂದರು.
::: ಸನ್ಮಾನ :::
ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿನಿಯರು, ಹೆಚ್ಚು ಅಂಕ ಗಳಿಸಲು ಕಾರಣಕರ್ತರಾದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ಮೌಲ್ಯ ಹಾಗೂ ರಾಜೇಶ್ವರಿ ಪ್ರಾರ್ಥಿಸಿ, ಸಂಘಟನೆಯ ಸದಸ್ಯೆ ಹಾಗೂ ನಿವೃತ್ತ ಶಿಕ್ಷಕಿ ಪ್ರೇಮ ಕೃಷ್ಣಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಕನ್ನಿಕಾ ನಿರೂಪಿಸಿ, ನಿರ್ಮಲ ವಂದಿಸಿದರು.







