ನಾಪೋಕ್ಲು ಮಾ.14 NEWS DESK : ಹೊದ್ದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭಗವತಿ ದೇವಾಲಯದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ಅಧಿಕ ಸಂಖ್ಯೆಯ ಗ್ರಾಮಸ್ಥರು ಪ್ರತಿಷ್ಠಾಪನೆ ಕಾರ್ಯಕ್ಕೆ ಸಾಕ್ಷಿಯಾದರು. ಬೆಳಗ್ಗೆ ಮೇಷಲಗ್ನ, ಶುಕ್ಲ ಪಕ್ಷ, ಚತುರ್ಥ ತಿಥಿ ಸುಮುಹೂರ್ತದಲ್ಲಿ ಪೀಠ ಪ್ರತಿಷ್ಠೆ, ಬಿಂಬ ಪ್ರತಿಷ್ಠೆ ,ನಾಗ ಪ್ರತಿಷ್ಠೆ, ಬ್ರಹ್ಮ ಕಳಶ ಪೂಜೆ , ಸಂಜೆ ಆದಿವಾಸ ಹೋಮ , ದೀಪಾರಾಧನೆ, ಮಹಾಬಲಿ ಪೀಠ, ಆದಿವಾಸ, ತ್ರಿಕಾಲ ಪೂಜೆ, ಕಲಶಾದಿ ವಾಸ ರಾತ್ರಿ ಪೂಜಾ ಮತ್ತಿತರ ಪೂಜಾ ಕೈಂಕರ್ಯಗಳು ಜರುಗಿತು.
ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯ ಗ್ರಮದ ದೈವಿಕ ತಾಣವಾಗಿ ರೂಪುಗೊಂಡಿತು. ಮರಕಡ ಶ್ರೀ ಗುರಪರಾಶಕ್ತಿ ಮಠದ ಪರಮಪೂಜ್ಯ ನರೇಂದ್ರನಾಥ ಯೋಗೇಶ್ವರ ಮಹಾಸ್ವಾಮಿಯವರ ಪೂರ್ಣ ಅನುಗ್ರಹದೊಂದಿಗೆ ನಿತಿನ್ ನರೇಂದ್ರನಾಥ ಯೋಗೇಶ್ವರ ಸ್ವಾಮಿ ಮತ್ತು ಮಾತೆ ಶಕುಂತಲಾ ಅಮ್ಮ ನವರ ದಿವ್ಯ ನೇತೃತ್ವದಲ್ಲಿ ನೂತನವಾಗಿ ಜೀರ್ಣೋದ್ಧಾರ ಗೊಂಡಿದೆ.
ಬ್ರಹ್ಮ ಶ್ರೀ ಕೆ.ಯು.ಪದ್ಮನಾಭ ತಂತ್ರಿಗಳು ಮತ್ತು ಬಳಗ, ದೇವಾಲಯದ ಮುಖ್ಯ ಅರ್ಚಕ ಶ್ರೀಕಾಂತ್ ವೈದಿಕ ಪೂಜಾ ವಿಧಿ ವಿಧಾನವನ್ನು ನೆರವೇರಿಸಿ ಕೊಟ್ಟರು.
ಈ ಸಂದರ್ಭ ಅರಮೇರಿ ಕಳಂಚೇರಿ ಮಠದ ಸ್ವಾಮೀಜಿಗಳಾದ ಶ್ರಿ ಶಾಂತಮಲ್ಲಿಕಾರ್ಜುನ ಸ್ವಾಮಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಚೌರಿರ ಕೆ.ಮೇದಪ್ಪ, ದೇವತಕ್ಕ ನೆರವಂಡ ಸಂಜಯ್ ಪೂಣಚ್ಚ, ಸಮಿತಿ ಸದಸ್ಯ ಚೌರಿರ ಉದಯ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಭಕ್ತರಿಗೆ ಅನ್ನದಾನ ನಡೆಯಿತು.
ವರದಿ : ದುಗ್ಗಳ ಸದಾನಂದ









