ಸಿದ್ದಾಪುರ ಮಾ.14 NEWS DESK : ನಲ್ವತ್ತೇಕರೆ ಶ್ರೀ ವಿನಾಯಕ ಸೇವಾ ಸಮಿತಿ ಹಾಗೂ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಸುಳ್ಯ ಕೆವಿಜಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ, ಮಾಹಿತಿ ಕಾರ್ಯಗಾರ, ಉಚಿತ ಔಷಧಿ ವಿತರಣೆ ಹಾಗೂ ರಕ್ತದಾನ ಶಿಬಿರ ನಡೆಯಿತು.
ನೆಲ್ಯಹುದಿಕೇರಿ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸ್ವರ್ಣ ಕ್ಲಿನಿಕ್ ನ ಡಾ.ಉದಯ್ ಕುಮಾರ್ ಉದ್ಘಾಟಿಸಿ, ಮಾತನಾಡಿ
ಬಡವರ, ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರ ಉಪಯುಕ್ತವಾಗಿದೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರ ಸಹಕಾರಿ ಇದನ್ನು ಸಾವ೯ಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗ, ಮಕ್ಕಳ ರೋಗ, ಇಎನ್ ಟಿ, ನೇತ್ರ ಚಿಕಿತ್ಸೆ, ಚರ್ಮ ಮತ್ತು ಲೈಂಗಿಕ ರೋಗ, ಎಲುಬು ಮತ್ತು ಕೀಲು ರೋಗ, ದಂತ ಚಿಕಿತ್ಸೆ, ಶ್ವಾಸಕೋಶ ಹಾಗೂ ತುರ್ತು ಚಿಕಿತ್ಸೆ ವಿಬಾಗ ಸೇರಿದಂತೆ ನುರಿತ 15 ವೈಧ್ಯರುಗಳು ಆರೋಗ್ಯ ತಪಾಸಣೆ ಮಾಡಿ, ಔಷಧಿಗಳನ್ನು ಉಚಿತವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಸಿದ್ಧಾಪುರ ದ ಹಿರಿಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಂದಿ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 45 ಮಂದಿ ರಕ್ತದಾನ ಮಾಡಿದರು.
ಗ್ರಾ ಪಂ.ಅಧ್ಯಕ್ಷೆ ಧನಲಕ್ಷ್ಮೀ, ಕಾರ್ಮಿಕ ಮುಖಂಡರಾದ ಬಿ.ಆರ್.ಭರತ್, ಅಂಬೇಡ್ಕರ್ ಸಮಿತಿಯ ಸತೀಶ್ ಹಾಗೂ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಟಿ.ಆರ್.ಮಣಿ, ಕಾರ್ಯದರ್ಶಿ ಎಚ್.ಬಿ.ಅಕ್ಷಯ್, ಸದಸ್ಯರಾದ ಟಿ.ಕೆ.ಮನೋಜ್, ಕೆ.ವಿ. ಪ್ರಭಾಕರ್ ಮತ್ತು ಎ.ಬಿ. ಸತೀಶ್ ಮತ್ತಿತರರು ಹಾಜರಿದ್ದರು.