ಮಡಿಕೇರಿ ಮಾ.14 NEWS DESK : ಮಡಿಕೇರಿ ಶಾಖೆಯ ಬ್ರಹ್ಮಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅಮೃತೇಶ್ವರ ದರ್ಶನ ಮತ್ತು 88ನೇ ತ್ರಿಮೂರ್ತಿ ಶಿವಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಾಯತ್ರಿಜೀ ಅವರ ದಿವ್ಯಸಾನ್ನಿಧ್ಯದಲ್ಲಿ ಶಿವಧ್ವಜ ಹಾರಿಸುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಸಿ.ಶ್ಯಾಂಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶಿವರಾತ್ರಿಯ ಶುಭಾಶಯಗಳನ್ನು ನೀಡಿ ಬ್ರಹ್ಮಾಕುಮಾರಿ ಸಹೋದರಿಯರ ಸೇವೆಯನ್ನು ಶ್ಲಾಘೀಸಿದರು.
ಇಂದಿನ ಒತ್ತಡಗಳ ಜೀವನದಲ್ಲಿ ಪರಮಾತ್ಮನ ಶಕ್ತಿಯ ಅವಶ್ಯಕತೆಯಿದೆ, ಆದ್ದರಿಂದ ಇಂತಹ ಶಾಂತಿಯ ಸ್ಥಾನಗಳಿಗೆ ಆಗಾಗ ಭೇಟಿ ಕೊಡುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.
ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷ್ಮಿ ಮಾತನಾಡಿ, ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಆಶ್ರಮದ ಒಡನಾಟವಿದ್ದು, ಈಗ ಅದನ್ನು ಪುನರಾರಂಭಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಪ್ರಶಾಂತ ವಾತಾವರಣದಲ್ಲಿ ಎಲ್ಲರೊಂದಿಗೆ ಶಿವರಾತ್ರಿಯ ಆಚರಣೆ ತುಂಬಾ ಖುಷಿ ನೀಡಿದೆ ಎಂದರು.
ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಆರ್. ಮುನಿರತ್ನ ಭಾಗವಹಿಸಿ, ಇಂದಿನ ಯುವ ಪೀಳಿಗೆಗೆ ಇಂತಹ ಧ್ಯಾನಕೇಂದ್ರಗಳ ಅವಶ್ಯಕತೆ ಬಹಳಷ್ಟಿದೆ ಎಂದರು.
ಬೈಲುಕುಪ್ಪೆಯ ನಲಂದಾ ಕ್ಯಾಂಪ್‍ನ ಚೇರ್‍ಮನ್ ಓಜಿನ್ ಸಮ್ಟೆನ್‍ಲಿಂಗ್‍ಪಾ ಕರ್ಮಾ ರಿಂಗ್‍ಪೋಚೆ ತಮ್ಮ ಪರಿವಾರದೊಂದಿಗೆ ಆಗಮಿಸಿ ಶಾಂತಿ ಮಂತ್ರವನ್ನು ಪಠಿಸಿ, ಸರ್ವರಿಗೂ ಶಾಂತಿಯ ಅವಶ್ಯಕತೆಯನ್ನು ತಿಳಿಸಿದರು.
ಎಫ್.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಷ್ಪಾ ಕುಟ್ಟಣ್ಣ ಮಾತನಾಡಿ, ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಮಹಿಳೆಯರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಬೇಕೆಂದರು.
ಎಸ್.ಎಲ್.ಎನ್. ಲೆವಿಸ್ಟಾ ಕಾಫಿಯ ಮಾಲೀಕರಾದ ಎಸ್.ಎಲ್.ಎನ್. ಸಾತಪ್ಪ ಮಾತನಾಡಿ, ಅನೇಕ ಶುಭ ವಿಚಾರಗಳ ಸಂಗಮವಿದೆ. ಈ ಸಮಯದಲ್ಲಿ ನಾವೆಲ್ಲ ಒಟ್ಟಿಗೆ ಶಿವನ ನೆಲೆಯಲ್ಲಿ ಸೇರಿರುವುದು ಶಿವನ ಇಚ್ಛೆಯೆಂದು ತಿಳಿಸಿದರು. ಎಲ್ಲರ ಸಮ್ಮುಖದಲ್ಲಿ ತಮ್ಮ ವಿಶೇಷ ಗಾಯನ ಕಲೆಯಿಂದ ಎಲ್ಲರಲ್ಲೂ ಭಕ್ತಿಭಾವವನ್ನು ಜಾಗೃತ ಮಾಡಿದರು.
ಹಿರಿಯ ವಕೀಲರು ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಬ್ರಹ್ಮಾಕುಮಾರೀಸ್ ಒಡನಾಟ ಬಹಳ ವರ್ಷಗಳಿಂದಿದೆ. ಸಹೋದರಿಯರ ತ್ಯಾಗ, ತಪಸ್ಸು, ಸೇವಾ ಭಾವ ಕಂಡು ಪ್ರಧಾನ ಕೇಂದ್ರ ಮೌಂಟ್ ಅಬುವಿಗೆ ಭೇಟಿ ನೀಡಿದ ಸಮಯವನ್ನು ಸ್ಮರಿಸುತ್ತಾ, ತಮ್ಮ ಬದುಕಿನ ಸುಖಮಯ ಸಮಯವೆಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ಶಿವರಾತ್ರಿ ಎಲ್ಲರಿಗೂ ಮಾನವ ಧರ್ಮವನ್ನು ಬೋಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ವಿರಾಜಪೇಟೆ ಪ.ಪಂ ಮಾಜಿ ಅಧ್ಯಕ್ಷರಾದ ಕಾಂತಿ ಸತೀಶ್ ಹಾಗೂ ಶಕ್ತಿ ದಿನಪತ್ರಿಕೆಯ ಹಿರಿಯರಾದ ರಾಜಲಕ್ಷ್ಮಿ , ಶಮ್ಮಿ ಸೂದನ, ಪ್ರೇಮ ಕರುಂಬಯ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಂಜ ಶ್ರೀ ವಿಜಯವಿನಾಯಕ ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷರಾದ ಅನಿತಾ ಪೂವಯ್ಯ ಎಲ್ಲರಿಗೂ ಶುಭಾಷಯ ತಿಳಿಸಿದರು.
ನಗರದ ಹಿರಿಯ ವೈದ್ಯರಾದ ಡಾ. ಮೋಹನ್ ಅಪ್ಪಾಜಿ ಶುಭ ಕೋರಿದರು.
ಸ್ತುತಿ ಮತ್ತು ಖುಷಿ ಶಿವನ ನೃತ್ಯಗಳನ್ನು ಹಾಗೂ ಗೀತಾ ಮಧುಕರ್ ಮತ್ತು ಮಾಧುರಿಯವರು ಭಕ್ತಿಗೀತೆಗಳ ಕಾರ್ಯಕ್ರಮ ನಡೆಸಿಕೊಟ್ಟರು.
ಹಿರಿಯರಾದ ಗಾಯತ್ರಿಜೀ ಸರ್ವರಿಗೂ ಆಶೀರ್ವದಿಸಿ ಪರಮಾತ್ಮನೇ ನಮ್ಮ ರಕ್ಷಕನು, ಅವನ ಸ್ಮೃತಿಯೇ ನಮಗೆ ರಕ್ಷಣಾ ಕವಚ, ಕೆಲಸ ಕಾರ್ಯಗಳನ್ನು ಮಾಡುತ್ತ, ಪರಮಾತ್ಮ ನ ಚಿಂತನೆ ಮಾಡುವುದೇ ರಾಜಯೋಗ ಎಂದರು.
ಭಾಗವಹಿಸಿದ ಎಲ್ಲರಿಗೂ ಈಶ್ವರೀಯ ಉಡುಗೊರೆಯೊಂದಿಗೆ ಗೌರವಿಸಿ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ಬ್ರಹ್ಮಾಕುಮಾರ ಬ್ರಹ್ಮಾಕುಮಾರಿಯರು ಗಾಯತ್ರೀಜಿಯವರಿಗೆ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ, ಗೌರವಿಸಿದರು.









