ಮಡಿಕೇರಿ ಮಾ.15 NEWS DESK : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನಲ್ಲಿ ಏ.1 ರಿಂದ 30 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
ದನ, ಎಮ್ಮೆ, ಆಡು, ಕುರಿ, ಹಂದಿ, ಸೇರಿದಂತೆ ಎಲ್ಲಾ ಸೀಳು ಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ರೋಗವು ರೈತರಿಗೆ ಅಪಾರವಾದ ಆರ್ಥಿಕ ನಷ್ಟವನ್ನುಂಟು ಮಾಡುವ ರೋಗವಾಗಿದೆ ಎಂದರು.
ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಅಸಾಧ್ಯವಾಗಿದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು, ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು/ ಹೋರಿಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ ಎಂದು ಮಾಹಿತಿ ನೀಡಿದರು.
ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದೆ. ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬರದಂತೆ ತಡೆಗಟ್ಟಬಹುದಾಗಿದೆ ಎಂದು ಲಿಂಗರಾಜ ದೊಡ್ಡಮನಿ ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯಂತೆ ದನ ಹಾಗೂ ಎಮ್ಮೆಗಳ ಸಂಖ್ಯೆ 76,920 ಇದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, 70 ಲಸಿಕಾ ದಾರರನ್ನು ಒಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿದೆ. ಲಸಿಕಾದಾರರು ರೈತರ/ ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ನೀಡಲಿದ್ದಾರೆ ಎಂದು ವಿವರಿಸಿದರು.
`ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 4 ತಿಂಗಳ ಮೇಲ್ಪಟ್ಟ ಎಲ್ಲಾ ದನ, ಎಮ್ಮೆಗಳಿಗೆ ಲಸಿಕೆ ಹಾಕಿಸುವಂತೆ ಕೋರಿದೆ.’
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಡಿಕೇರಿ ದೂ.ಸಂ. 9448647276, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಸೋಮವಾರಪೇಟೆ ದೂ.ಸಂ. 9448597496, ಸಹಾಯಕ ನಿರ್ದೇಶಕರು, ಪಶುಆಸ್ಪತ್ರೆ, ವಿರಾಜಪೇಟೆ ದೂ.ಸಂ. 9141093996, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ 9448422269 ಹಾಗೂ ಸಹಾಯಕ ನಿರ್ದೇಶಕರು, ಪಶುಆಸ್ಪತ್ರೆ, ಪೊನ್ನಂಪೇಟೆ ದೂ.ಸಂ. 9449081343 ನ್ನು ಸಂಪರ್ಕಿಸಬಹುದು ಎಂದು ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಲಿಂಗರಾಜ ದೊಡ್ಡಮನಿ ತಿಳಿಸಿದರು.








