ಗೋಣಿಕೊಪ್ಪ ಮಾ.16 NEWS DESK : ಚೇನಿವಾಡ-ಬೇಗೂರು ಗ್ರಾಮದ 850 ವರ್ಷಗಳ ಪುರಾತನ ಶ್ರೀ ಮಹಾವಿಷ್ಣು ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಮಾ.19 ರಿಂದ 25 ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮಾ.19 ರಿಂದ 25 ರವರೆಗೆ ಏಳು ದಿನಗಳ ಕಾಲ ದೇವಾಲಯದ ನವೀಕರಣ ನೂತನ ಬಿಂಬಗಳ ಪುನರ್ ಪ್ರತಿಷ್ಠಾಪನೆ ಕಾರ್ಯ ನಡೆಯಲಿದ್ದು, ತಂತ್ರಿಗಳಾದ ಬ್ರಹ್ಮಶ್ರೀ ಗೋಪಾಲಕೃಷ್ಣ ಆಡಿಗ ಪೆರ್ಲ ನೇತೃತ್ವದಲ್ಲಿ ಶಿಲ್ಪಿ ಜಗನಿವಾಸ್ ರಾವ್ ಪುತ್ತೂರು ಸಮ್ಮುಖದಲ್ಲಿ ಪ್ರಧಾನ ಅರ್ಚಕ ನಾಗೇಶ್ ಸಹಕಾರದೊಂದಿಗೆ ಪೂಜಾ ವಿಧಿ ವಿಧಾನಗಳು ಮತ್ತು ವಿಗ್ರಹ ಪ್ರಪ್ರತಿಷ್ಠಾಪನೆಗಳು ನೆರವೇರಲಿದೆ ಎಂದು ತಿಳಿಸಿದರು.
ಮಾ.19 ರಂದು ಸಂಜೆ 4 ಗಂಟೆಗೆ ತಂತ್ರಿಗಳನ್ನು ಹಾಗೂ ಶಿಲ್ಪಿಗಳನ್ನು ಪೂರ್ಣ ಕುಂಭ ಸ್ವಾಗತದಿಂದ ಬರಮಾಡಿಕೊಳ್ಳಲಾಗುವುದು.
ಮಾ.20 ರಂದು ಬೆಳಗ್ಗೆ 6.30ಕ್ಕೆ ಗಣಪತಿ ಹವನ, ಸಪ್ತಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹವನ, ವಾಸ್ತು ಹವನ, ಬಲಿ, ದಿಶಾಬಲಿ, ಮಹಾಪೂಜೆಗಳು ನಡೆಯಲಿದೆ.
ಮಾ.21 ರಂದು ಐಕ್ಯಮತ್ಯ ಬಾಗ್ಯ ಸೂಕ್ತ ಹವನ, ಗಣಪತಿ ಹವನ, ಅಂಕುರ ಪೂಜೆ, ಬಾಲಾಲಯದಲ್ಲಿ ಅನುಜ್ಞಾ ಕಲಶ, ಗಣಪತಿ, ಸುಬ್ರಮಣ್ಯ, ಮಹಾ ವಿಷ್ಣು, ಬಿಂಬಚಾಲನೆ, ಜಲೋದ್ಧಾರ, ನೇತ್ರೋನ್ಮಿಲನೆ, ಬಿಂಬಶುದ್ದಿ ಕಳಶಾಭಿಷೇಕ, ಮಹಾಪೂಜೆ, ಶಾಯಪೂಜೆ, ನಿದ್ರಾಕಳಷ, ದಾನ್ಯ ದಿವಸ, ಆಧಿವಾಸ ಹವನ ನೆರವೇರಲಿದ್ದು, ಮಾ.22ರಂದು ನವಗ್ರಹ ಹವನ, ತತ್ವ ಹವನ, ಗಣಪತಿ ಪೂಜೆ, ಅಂಕುರಪೂಜೆ, ಜೀವಕಲಶ ಸ್ಥಾಪನೆ ನಡೆಯಲಿದೆ.
ಮಾ.23 ರಂದು ಗಣಪತಿ ಹವನ, ಪ್ರಾಯಶ್ಚಿತ ಹವನ, ನಾಗಸನ್ನಿಧಿಯಲ್ಲಿ ಸ್ಪಪ್ತಶುದ್ದಿ, ವಾಸ್ತುಬಲಿ ಸೇರಿದಂತೆ ಇನ್ನಿತರ ಪೂಜಾ ಕಾರ್ಯಗಳು ನಡೆಯಲಿದೆ.
ಮಾ.24 ರಂದು ಗಣಪತಿ ಪೂಜೆಯೊಂದಿಗೆ ವಿಷ್ಣುಯಾಗ, ಗೋಪೂಜೆ, ದಂಪತಿ ಪೂಜೆ ಜತೆಗೆ ವೃಷಭ ಲಗ್ನದಲ್ಲಿ ಗಣಪತಿ, ಸುಬ್ರಹ್ಮಣ್ಯ, ನಾಗದೇವತೆಗಳ ಪ್ರತಿಷ್ಠಾಪನೆಗಳು ನಡೆಯಲಿದ್ದು, ಸಂಜೆ ಬ್ರಹ್ಮ ಕಳಶ, ಮಂಡಳ ಪೂಜೆ, ತಯಂಬಕ ದೀಪಾರಾಧನೆ, ಆಶ್ಲೇಷ ಬಲಿ ನಡೆಯಲಿದೆ.
ಮಾ.25 ರಂದು ಶ್ರೀ ಸೂಕ್ತ ಹವನ, ಬ್ರಹ್ಮಕಳಶಾಭಿಷೇಕ, ಅಲಂಕಾರಪೂಜೆ, ನಿತ್ಯ ನಿರ್ಣಯ ಪೂಜೆ ನಡೆಯಲಿದ್ದು, ಅಪರಾಹ್ನ 2 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಧಾನಿಗಳಿಗೆ, ಅತಿಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೀಪಾರಾಧನೆ, ರಂಗಪೂಜೆ ನಡೆಯಲಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಂತ್ರಂಡ ರಾಜೇಂದ್ರ ಮಾತನಾಡಿ ಅಷ್ಟಬಂಧ ಬ್ರಹ್ಮ ಕಳಶೋತ್ಸವ ಪ್ರಯುಕ್ತ ವಿಶೇಷವಾಗಿ ಮಾ.22ರಂದು ನವಗ್ರಹ ಶಾಂತಿ ಪೂಜೆ, ಮಾ.24ರಂದು ವಿಷ್ಣುಯಾಗ, 108 ತೆಂಗಿನಕಾಯಿ ಹವನ, ಮಾ.25ರಂದು ಲಕ್ಷ್ಮಿ ಪೂಜೆಗಳು ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸುಮಾರು ಒಂದೂವರೆ ಕೋಟಿಯಷ್ಟ್ಟು ಅನುದಾನದ ಅವಶ್ಯಕತೆ ಇದೆ. ದಾನಿಗಳ ಸಹಕಾರದಿಂದ ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳು ಮುಂದುವರೆದಿದ್ದು, ಅಷ್ಠಬಂಧ ಬ್ರಹ್ಮಕಳಶೋತ್ಸವ ನಡೆಯಲಿದೆ. ಮತ್ತಷ್ಟ ಜನಸಹಕಾರದ ಅಗತ್ಯತೆ ಇದ್ದು, ಭಕ್ತರು ಸಹಕಾರದ ಮನೋಭಾವವನ್ನು ವ್ಯಕ್ತಪಡಿಸಬೇಕೆಂದು ಈ ಸಂದರ್ಭ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಚೋಡುಮಾಡ ರವಿ, ಸಹಕಾರ್ಯದರ್ಶಿ ಮಲ್ಲಂಡ ದನೀಷ್ ಸುಬ್ರಮಣಿ, ಖಜಾಂಜಿ ಮಲ್ಲಂಡ ಮಧುದೇವಯ್ಯ, ಸದಸ್ಯರುಗಳಾದ ಕಾಯಪಂಡ ಚಿಣ್ಣಪ್ಪ, ಮತ್ರಂಡ ದಿನೇಶ್ ಕಾವೇರಪ್ಪ, ಚೋಡುಮಾಡ ಸುಬ್ರಮಣಿ, ಮಲ್ಲಂಡ ತಮ್ಮಿ ನಾಚಪ್ಪ, ಮಲ್ಲಂಡ ವಿನಯ್ ಕಾವೇರಪ್ಪ, ಮಲ್ಲಂಡ ದಿನೇಶ್, ಮಲ್ಲಂಡ ಪೊನ್ನಪ್ಪ, ಕಾಯಪಂಡ ದಿನು, ಮಂಡಂಗಡ ಬೋಪಣ್ಣ, ಕೇಚಟ್ಟಿರ ಸಪ್ತ, ನಾಯಂದರ ರಾಜಪ್ಪ, ತಕ್ಕ ಮಲ್ಲಂಡ ವಿಶ್ವನಾಥ್ ಹಾಜರಿದ್ದರು.
ಹಿನ್ನೆಲೆ: 850 ವರ್ಷಗಳ ಇತಿಹಾಸ ಹೊಂದಿರುವ ವಿಷ್ಣುದೇವಾಲಯ ಬೇಗೂರು ಚೀನಿವಾಡ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ಪತ್ತೆಯಾಯಿತು. ದೇವಾಲಯದ ವಿಗ್ರಹವು ಕಾಡಿನಲ್ಲಿ ಶಿಕ್ಷಕರೊಬ್ಬರು ಕೋಲಿನಿಂದ ಮಣ್ಣು ಕೆರೆಯುತ್ತಿದ್ದಾಗ ಗೋಚರಿಸಿದೆ. ನಂತರ ಗ್ರಾಮಸ್ಥರು ಪರಿಶೀಲಿಸಿದಾಗ ಕಾಡಿನ ಒಳಭಾಗದಲ್ಲಿ ಜೀರ್ಣವ್ಯವಸ್ಥೆಯಲ್ಲಿದ್ದ ದೇವಾಲಯ ಆವರಣದ ಭಾವಿಯೊಂದರಲ್ಲಿ ಮತ್ತಷ್ಟು ವಿಗ್ರಹಗಳು, ಪೂಜಾಸಾಮಾಗ್ರಿಗಳು ದೊರೆತ್ತಿದೆ. ಈ ಹಿಂದೆ ಟಿಪ್ಪು ಕೊಡಗಿಗೆ ದಾಳಿ ನಡೆಸಿದಾಗ ದೇವಾಲಯಗಳ ಮೇಲೆ ಆಕ್ರಮಣದ ಹಿನ್ನೆಲೆಯಲ್ಲಿ ವಿಗ್ರಹಗಳ ಭದ್ರತೆಗಾಗಿ ಆರ್ಚಕರು ಅಥವಾ ಗ್ರಾಮಸ್ಥರು ವಿಗ್ರಹವನ್ನು ಭಾವಿಗೆ ಹಾಕಿರಬಹುದೆಂದು ಹಿರಿಯರು ಅಂದಾಜಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಊರಿಗೆ ಉಂಟಾಗುತ್ತಿದ್ದ ಕ್ಷೋಬೆ, ಅನಾರೋಗ್ಯ ಇನ್ನಿತರ ದೀರ್ಘ ಸಮಸ್ಯೆಗಳಿಗೆ ಕಾರಣವನ್ನು ಊರಿನವರು ತಂತ್ರಿಗಳಲ್ಲಿ ಪ್ರಶ್ನಿಸಿದಾಗ ಊರಿನಲ್ಲಿ ದೇವಾಲಯವಿದ್ದು, ಅದು ಪುನರ್‍ಪ್ರತಿಷ್ಠಾಪನೆಗೊಂಡರೆ ಊರಿನಲ್ಲಿ ಶಾಂತಿ ನೆಲೆಸುವುದಾಗಿ ತಿಳಿಸಿದ್ದಾರೆ. ಈ ಉದ್ದೇಶದೊಂದಿಗೆ ಶ್ರೀ ಮಹಾವಿಷ್ಣು ದೇವಾಲಯದ ಜೀರ್ಣೋದ್ಧಾರ ಕಾರ್ಯ ಊರಿನ ಧಾನಿಗಳ ಸಹಕಾರದಿಂದ ನಡೆಯುತ್ತಿದೆ.









