ಮಡಿಕೇರಿ ಮಾ.20 NEWS DESK : ಯಾವುದೇ ಕ್ಷೇತ್ರದ ಸಾಧನೆಗೆ ವಿದ್ಯೆ ಮತ್ತು ಹಣವಿದ್ದರೆ ಸಾಲದು, ಸಾಧಿಸುವ ಮನಸ್ಸಿರಬೇಕು. ಸಾಹಿತ್ಯ ಕೃಷಿ ಎನ್ನುವುದು ಒಂದು ತಪಸ್ಸು ಇದ್ದಂತೆ ಎಂದು 2024ರ ಕುಂಡ್ಯೋಳಂಡ ಹಾಕಿ ನಮ್ಮೆಯ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 87ನೇ ಪುಸ್ತಕ ಹಾಗೂ ಸಾಹಿತಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ರಚಿಸಿರುವ 7ನೇ ಕೊಡವ ಪುಸ್ತಕ “ಕೂಪದಿ”ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದ್ದು, ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದೆ. ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರ ಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು. ಕಣ್ಣು, ಕಿವಿ ಮತ್ತು ಹೃದಯಕ್ಕೆ ಕೆಲಸ ಕೊಡಬೇಕು. ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ ಎಂದರು.
ಕೊಡವ ಮಕ್ಕಡ ಕೂಟದ ವತಿಯಿಂದ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸಾಕಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ. ಕೊಡಗಿನ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಹೊರತರುವಂತಾಗಲಿ ಎಂದು ರಮೇಶ್ ಮುದ್ದಯ್ಯ ಶುಭ ಹಾರೈಸಿದರು.
“ಕೂಪದಿ” ಪುಸ್ತಕದ ಬರಹಗಾರರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, “ಕೂಪದಿ” ನನ್ನ ಕನಸಿನ 7ನೇ ಪುಸ್ತಕವಾಗಿದ್ದು, ಸಣ್ಣ ಕಥೆಗಳ ಸಂಗ್ರಹವಾಗಿದೆ. ಜೀವ, ಜೀವನ, ಕಣ್ಣಿಗೆ ಕಾಣುವ ಸಹಜತೆ ಇದರಲ್ಲಿದೆ. ಕರ್ಮ, ರೋಷ, ಚೋರೆ ಸಂಬಂಧ, ಮನಸಾಕ್ಷಿ, ಚದಿ, ನಳ, ಮಾಜಿ ಪೋಕತ ನಂಬಲ, ಹಣೆ ಬರಹ, ಮಿಸ್ಡ್ ಕಾಲ್ ಕಥೆಯ ಸಂಗ್ರಹ ಓದುವವರಿಗೆ ಖುಷಿ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬರಹಗಾರರಿಗೆ ದಾನಿಗಳ ಸಹಕಾರದ ಅಗತ್ಯವಿದೆ, ಪುಸ್ತಕಗಳನ್ನು ಓದಿ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಮಾತ್ರ ಸಾಹಿತಿಗಳಿಗೆ ಮತ್ತಷ್ಟು ಪುಸ್ತಕಗಳ ರಚನೆಗೆ ಸ್ಫೂರ್ತಿ ದೊರೆಯುತ್ತದೆ ಎಂದರು.
ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಮಾತನಾಡಿ, ಕೊಡವ ಸಂಘಟನೆ ಮತ್ತು ಕೊಡವ ಸಮಾಜಗಳು ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಡವ ಮಕ್ಕಡ ಕೂಟ ಮಾಡುತ್ತಿದೆ. ನಾಲ್ಕು ಸಾವಿರ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಹೊಸ ಹೊಸ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ಅವರನ್ನು ಪ್ರೇರಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಡವ ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಬಂದಿರುವುದು ಮತ್ತು ಹಲವು ಕಡೆಗಳಲ್ಲಿ ಕೊಡವ ಜಾನಪದ ಕಲಾ ಪ್ರಕರಗಳ ತರಬೇತಿ ಕಾರ್ಯಕ್ರಮವನ್ನು ನಡೆಸಿ, ಯುವ ಜನರಲ್ಲಿ ಕೊಡವ ಕಲೆಯ ಬಗ್ಗೆ ಆಸಕ್ತಿ ಮೂಡಿಸಿರುವುದು ಶ್ಲಾಘನಾರ್ಹ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ ದಾನಿಗಳ ಸಹಕಾರದಿಂದ ಈಗಾಗಲೇ 87 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದ್ದು, 13 ಪುಸ್ತಕಗಳು ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು 100 ಪುಸ್ತಕಗಳನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸುವ ಗುರಿ ಹೊಂದಲಾಗಿದೆ ಎಂದರು.
ಯೋಧರ ಬಗ್ಗೆ ಮಾಹಿತಿ ಇರುವ ಪುಸ್ತಕಗಳನ್ನು ಹೊರತರುವ ಅಗತ್ಯತೆ ಇದ್ದು, ಸಂಶೋಧನ ಕೃತಿಗಳನ್ನು ರಚಿಸಲು ಕೊಡಗಿನಲ್ಲಿ ಹಲವು ಅವಕಾಶಗಳಿದೆ. ಸಂಶೋಧಕರು ಮುಂದೆ ಬರಬೇಕು. ಯುವ ಪೀಳಿಗೆಗೆ ಹೊಸ ಸಂಶೋಧನ ಕೃತಿಗಳು ಬರಬೇಕು. ಸಾಹಿತ್ಯದ ಬಗ್ಗೆ ಯುವಕ, ಯುವತಿಯರಿಗೆ ಆಸಕ್ತಿ ಬರಬೇಕು. ಪುಸ್ತಕ ಓದುಲು ಯುವಕರನ್ನು ಪ್ರೇರಣೆಗೊಳಿಸಬೇಕು. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ಕನ್ನಡ, ಇಂಗ್ಲಿಷ್ ಹಾಗೂ ಕೊಡವ ಭಾಷೆಯ ಪುಸ್ತಕಗಳಿಗೆ ಒತ್ತು ನೀಡುವ ಮೂಲಕ ಕೊಡಗು, ಕೊಡವ ಭಾಷೆಯನ್ನು ಲೋಕಕ್ಕೆ ತಿಳಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 87 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ರಾಜ್ಯ ಪ್ರಶಸ್ತಿ, “ಗೌರಮ್ಮ ದತ್ತಿ ನಿಧಿ “ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ.
ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಆಟ್‍ಪಾಟ್ ಪಡಿಪು (ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ.), ಕೊಡವ ಕ್ರೀಡಾ ಕಲಿಗಳು, Kodagu Principality V/s British Emipire, The Major who kept his cool, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ ಎಂದರು.
ವೇದಿಕೆಯಲ್ಲಿ ಸಮಾಜ ಸೇವಕರಾದ ಚೀಯಕಪೂವಂಡ ಸಚಿನ್ ಪೂವಯ್ಯ, ಪೊನ್ನಚೆಟ್ಟಿರ ಪ್ರದೀಪ್ ಉಪಸ್ಥಿತರಿದ್ದರು.
ಪರಿಚಯ ::
::: ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ :::
ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಹೆಸರಾಂತ ಸಾಹಿತಿಗಳಲ್ಲೊಬ್ಬರು. ಈಗಾಗಲೇ ಬರೆದಿರುವ ಕೊಡವ ಭಾಷೆಯ “ಪಾರು” ಕಾದಂಬರಿ, “ಬದ್‍ಕ್‍ರ ನಡೆ” ಲೇಖನ ಸಂಗ್ರಹ ಪುಸ್ತಕ, “ಪೂ ಬಳ್ಳಿ” ಕವನ ಸಂಕಲನ ಪುಸ್ತಕ ಬಿಡುಗಡೆಗೊಂಡಿದ್ದು, “ಕೂಪದಿ” ಇವರ ನಾಲ್ಕನೇ ಕೊಡವ ಪುಸ್ತಕವಾಗಿದೆ.
ಕನ್ನಡದಲ್ಲಿ “ಕಾಡಿದ ನೆನಪುಗಳು” “ಕಾಡು ಹಕ್ಕಿಯ ಹಾಡು”, “ಕನವರಿಕೆ” ಎನ್ನುವ ಕಥೆ ಕವನ ಸಂಕಲನ ಈಗಾಗಲೇ ಬಿಡುಗಡೆಗೊಂಡಿದೆ.
“ಪಾರು” ಕಾದಂಬರಿಗೆ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ದೊರೆತಿದೆ. ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದಿಂದ “ವಿಶ್ವಮಾನ್ಯ ಕನ್ನಡಿಗ” ಪ್ರಶಸ್ತಿ, ಜೈ ಕರ್ನಾಟಕ ಪಶಸ್ತಿ, ಜೇಸಿ ಐ ಸಾಹಿತ್ಯ ರತ್ನ ಪ್ರಶಸ್ತಿ, ಸತ್ಯವತಿ ವಿಜಯ ರಾಘವ ಚಾರಿಟೇಬಲ್ ಟ್ರಸ್ಟ್ ಧರ್ಮದರ್ಶಿಗಳ ದತ್ತಿನಿಧಿ ಪ್ರಶಸ್ತಿ ದೊರೆತಿದೆ.
ವಿವಿಧ ಸಂಘ ಸಂಸ್ಥೆಯಿಂದ ಸನ್ಮಾನ, ರಾಜ್ಯ ಮಟ್ಟ-ಜಿಲ್ಲಾ ಮಟ್ಟ ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ನಾಡಿನ ಬಹುಭಾಷಾ ಕವಿಗೋಷ್ಠಿಯಲ್ಲೂ ಭಾಗವಹಿಸಿದ್ದಾರೆ.
ಕೊಡವ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತ್, ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಸೇವೆ ಮಾಡಿದ ಅನುಭವವಿದೆ.