ಮಡಿಕೇರಿ ಏ.3 NEWS DESK : ಕನ್ನಡ ಚಿತ್ರರಂಗದ ಹಿತದೃಷ್ಠಿಯಿಂದ ಹಿರಿಯ ಕಲಾವಿದರು ಮತ್ತು ಹೊಸ ಕಲಾವಿದರು ಜೊತೆಗೂಡಿ ಕರ್ನಾಟಕ ಫಿಲಂ ಅಸೋಸಿಯೇಷನ್ ಎಂಬ ನೂತನ ಫಿಲಂ ಚೇಂಬರ್‍ಅನ್ನು ಸ್ಥಾಪನೆ ಮಾಡಿದ್ದು, ಮೂವಿ ಬ್ಯಾನರ್ ಹಾಗೂ ಮೂವಿ ಟೈಟಲ್ ನೊಂದಾಣಿಗೆ ಅವಕಾಶ ಇದೆ ಎಂದು ಅಸೋಸಿಯೇಷನ್‍ನ ಸಲಹೆಗಾರ ಡಾ.ಎನ್.ಎನ್.ಪ್ರಹ್ಲಾದ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಅಸೋಸಿಯೇಷನ್‍ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಮೂವಿ ಬ್ಯಾನರ್, ಮೂವಿ ಟೈಟಲ್, ಸಿನಿಮಾಕ್ಕೆ ಸಂಬಂಧಿಸಿದ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮ್ಯಾನ್, ಡ್ಯಾನ್ಸ್, ಸಂಗೀತ, ಫೈಟ್ ಮಾಸ್ಟರ್ ಸೇರಿದಂತೆ ಎಲ್ಲಾ ವಿಭಾಗದ ನೊಂದಾಣಿಗೆ ಅವಕಾಶ ಇದೆ ಎಂದರು.
ಇದು ಅಜೀವ ಸದಸ್ಯತ್ವ ನೊಂದಾಣಿಯಾಗಿದ್ದು, ನೊಂದಾಣಿ ನಂತರ ಗುರುತಿನ ಚೀಟಿ ನೀಡಲಾಗುವುದು. ಅಲ್ಲದೇ ಸದಸ್ಯರು ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಮತ್ತು ಮತದಾನ ಮಾಡುವ ಅವಕಾಶ ಕಲ್ಪಿಸಲಾಗುವುದೆಂದರು.
ಅಸೋಸಿಯೇಷನ್ ವತಿಯಿಂದ ಅಗತ್ಯ ಇರುವ ಸದಸ್ಯರಿಗೆ ಆರೋಗ್ಯ ಸೌಲಭ್ಯ, ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ವಿತರಿಸುವ ಚಿಂತನೆ ಇದೆ ಎಂದ ಅವರು, ಮೇಕಪ್ ಮ್ಯಾನ್, ಸ್ಕ್ರಿಪ್ಟ್ ಬರಹಗಾರರು, ಸಂಕಲನ, ಛಾಯಾಗ್ರಹಣ, ನಿರ್ದೇಶನ, ನಟನೆ, ಚಿತ್ರೀಕರಣ, ಶೀರ್ಷಿಕೆ ಆಯ್ಕೆ, ಚಿತ್ರಗೀತೆ ರಚನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗುವುದೆಂದು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್.ರವೀಂದ್ರ, 2023ರ ಡಿಸೆಂಬರ್‍ನಲ್ಲಿ ಆರಂಭವಾದ ಅಸೋಸಿಯೇಷನ್‍ನಲ್ಲಿ ಈಗಾಗಲೇ 335 ಸದಸ್ಯರಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಸದಸ್ಯರಾದ ಮುನ್ನೂರು ಕೋಟಿ ರಾಧ, ಹೇಮಲತ ಉಪಸ್ಥಿತರಿದ್ದರು.









