ಮಡಿಕೇರಿ ಏ.3 NEWS DESK : ನಿಷೇಧಿತ ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ರಾಜ್ಯದ ಮೂವರು ಆರೋಪಿಗಳನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಕೇರಳ ತಾಮರಶೇರಿ ನಿವಾಸಿಗಳಾದ ಮಹಮದ್ ಅಶ್ರಫ್(49), ತಸ್ವೀಕ್(24) ಮತ್ತು ಎ.ಟಿ.ಅಲ್ಯಾಝ್(27) ಎಂಬವರೇ ಬಂಧಿತ ಆರೋಪಿಗಳಾಗಿದ್ದು, ಇವರ ಬಳಿ ಇದ್ದ 1 ಕೆ.ಜಿ 400 ಗ್ರಾಂ ಗಾಂಜಾ ಮತ್ತು 2 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ತಿತಿಮತಿಯ ಮೈಸೂರು-ವಿರಾಜಪೇಟೆ ಹೆದ್ದಾರಿಯಲ್ಲಿ ಕೆಲವು ವ್ಯಕ್ತಿಗಳು ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಗೋಣಿಕೊಪ್ಪ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಂದರ್ಭ ಮೂವರು ಆರೋಪಿಗಳು ಮಾಲು ಸಹಿತ ಸೆರೆಯಾಗಿದ್ದಾರೆ. ವಿರಾಜಪೇಟೆ ಡಿವೈಎಸ್‌ಪಿ ಆರ್.ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ ಮುಧೋಳ, ಗೋಣಿಕೊಪ್ಪ ಠಾಣಾಧಿಕಾರಿ ರೂಪಾದೇವಿ ಬಿರಾದರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.











