ಮಡಿಕೇರಿ ಮಾ.5 NEWS DESK : ಜಾನಪದ ಬ್ರಹ್ಮ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜ್ಞಾಪಕಾರ್ಥವಾಗಿ ಏ.4 ರಿಂದ ರಾಷ್ಟ್ರೀಯ ಜಾನಪದ ಹಬ್ಬ ಪ್ರಯುಕ್ತ ವಿವಿಧ ಸ್ಪರ್ಧೆ, ಕಾರ್ಯಕ್ರಮಗಳು ಸೇರಿದಂತೆ ಒಟ್ಟು ನಿರಂತರವಾಗಿ 150 ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತಿಹಾಸ, ವಿಜ್ಞಾನ, ವಾಣಿಜ್ಯ ಮತ್ತು ಪುರಾಣದ ಮೂಲಬೇರು ಜಾನಪದ. ಇಡೀ ಸೃಷ್ಟಿಯ ಸರ್ವ ಋತುಗಳನ್ನು ತನ್ನ ಒಡಲಿನಲ್ಲಿ ಅದುಮಿಟ್ಟುಕೊಂಡು, ಅಗತ್ಯ ಬಿದ್ದಾಗ ವಿವಿಧ ರೂಪದಲ್ಲಿ ಬಿತ್ತರಿಸಿದ ವಾಸ್ತವ ಇತಿಹಾಸವೇ ಜಾನಪದ. ಪ್ರಪಂಚದ ಅತ್ಯಂತ ವಿಭಿನ್ನ, ವಿಶಿಷ್ಟ ಇತಿಹಾಸ, ಸಂಸ್ಕೃತಿ, ಹಿನ್ನೆಲೆ ಮುನ್ನಲೆ ಹೊಂದಿರುವ ಕೊಡವ ಜಾನಪದವೂ ಪ್ರಪಂಚದ ಮೂಲದಿಂದಲೇ ಹರಿದು ಬಂದುದಕ್ಕೆ ಜಾನಪದದಲ್ಲಿಯೇ ಅಸಂಖ್ಯಾತ ಸಾಕ್ಷಿಗಳು ದೊರೆಯುತ್ತವೆ. ಮೂಲೆ ಮೂಲೆಗೆ, ಬಾಯಿಂದ ಬಾಯಿಗೆ ಹರಿದು ಹಂಚಿ ಹೋಗಿದ್ದ ಕೊಡವ ಜಾನಪದವನ್ನ ತಮ್ಮ ಸಾಮರ್ಥ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ 1920ರಲ್ಲಿ ಪಟ್ಟೋಲೆ ಪಳಮೆ ಎಂಬ ಪುಸ್ತಕ ರೂಪದಲ್ಲಿ ದಾಖಲಿಸಿದ ಹೆಗ್ಗಳಿಕೆ ದಿ. ನಡಿಕೇರಿಯಂಡ ಚಿಣ್ಣಪ್ಪ ಅವರದ್ದು. ಈ ಗ್ರಂಥ ಇಡೀ ಭಾರತೀಯ ಪ್ರಥಮ ಪ್ರಕಟಿತ ಜಾನಪದ ಗ್ರಂಥ ಎನ್ನುವುದು ಮತ್ತೊಂದು ಹಿರಿಮೆ.
ಇಂತ ಮೇರು ವ್ಯಕ್ತಿ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜಯಂತಿಯು ಐತಿಹಾಸಿಕವಾಗಿಸಲು ರಾಷ್ಟ್ರೀಯ ಜಾನಪದ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ 12ತಿಂಗಳೂ ಕೂಡ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಾನಪದ ಶೋಧನೆ, ಹಾಡು, ಕಥೆ, ಆಟ, ಪರಂಪರೆ, ಪುಸ್ತಕ, ಪ್ರಶಸ್ತಿ, ಸ್ಥಳನಾಮ, ಪ್ರಶಸ್ತಿ, ಅಂಚೆಚೀಟಿ, ಗ್ರಂಥಾಲಯ, ಸ್ಮರಣ ಸಂಚಿಕೆ, ಸಾಕ್ಷ್ಯಚಿತ್ರ ಸೇರಿದಂತೆ 150ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕಾರ್ಯಕ್ರಮದ ಪೂರ್ಣ ರೂಪುರೇಷೆ, ರಾಷ್ಟ್ರೀಯ ಜಾನಪದ ಹಬ್ಬ ನಡೆಯುವ ಸ್ಥಳದ ಮತ್ತು ಯಶಸ್ಸಿನ ಗುರಿಯ ಕುರಿತು ಕೆಲವೇ ದಿನಗಳಲ್ಲಿ ಹಿರಿಯ ಜಾನಪದ ತಜ್ಞರು, ಸಮಾಜ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳ ಸಭೆ ಮಾಡಿ ಸಂಪೂರ್ಣ ರೂಪುರೇಷೆ ತಯಾರಿಸಲಾಗುವುದು ಎಂದು ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಪ್ರಪಂಚದ ಇತಿಹಾಸದಲ್ಲಿ ಪ್ರಥಮ ಭಾರಿಗೆ ಆಯೋಜನೆ ಗೊಳ್ಳುವ ಈ ವಿಭಿನ್ನ, ಐತಿಹಾಸಿಕವಾದ ರಾಷ್ಟ್ರೀಯ ಜಾನಪದ ಹಬ್ಬಕ್ಕೆ ಸರ್ವರೂ ಮುಕ್ತ ಸಲಹೆ, ಅಭಿಪ್ರಾಯಗಳನ್ನು ನೀಡುವ ಮೂಲಕ ಸಹಕಾರ ನೀಡಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಮನವಿ ಮಾಡಿದೆ.