ಮಡಿಕೇರಿ ಏ.7 NEWS DESK : ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಅಪೇಕ್ಷೆ ಮತ್ತು ಆಶೀರ್ವಾದದಿಂದ ಮೈಸೂರು- ಕೊಡಗು ಕ್ಷೇತ್ರದ ಅಭ್ಯರ್ಥಿಯಾಗಿರುವೆ. ಕಾವೇರಿ ಉದ್ಭವಿಸುವ ಸ್ಥಳದಲ್ಲಿ ಸೇವೆಗೆ ಅವಕಾಶ ಸಿಕ್ಕಿರುವುದೇ ಸೌಭಾಗ್ಯ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ತಿಳಿಸಿದ್ದಾರೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಬಸ್ ನಿಲ್ದಾಣದಲ್ಲಿ ಇಂದು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾವೇರಿಯ ಉಗಮ ಸ್ಥಾನ ಮತ್ತು ವೀರ ಪರಂಪರೆಯ ನಾಡಿನಲ್ಲಿ ಸೇವೆಗೆ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದರು.
ಪ್ರಧಾನಮಂತ್ರಿಗಳ ಆಶೀರ್ವಾದದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ದೊರಕಿದೆ. ನಿಮ್ಮೆಲ್ಲರ ಸೇವೆಯನ್ನು ಪ್ರಾಮಾಣಿಕವಾಗಿ, ಮಾಡಲು ನಾನು ಬದ್ಧ ಎಂದು ಭರವಸೆ ನೀಡಿದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಮಂತ್ರಿ ಮೋದಿಯವರು ಹಲವು ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ವಿಶ್ವದಲ್ಲೇ ಭಾರತವನ್ನು ಗುರುತಿಸುವ ರೀತಿಯಲ್ಲಿ ಆಡಳಿತ ನಡೆಸಿದ್ದಾರೆ. ಇದುವರೆಗೂ ಆಗದ ಹಲವು ಜನಪರ ಕಾರ್ಯಕ್ರಮಗಳು ಮೋದಿಯವರ ಅವಧಿಯಲ್ಲಿ ಶೀಘ್ರಗತಿಯಲ್ಲಿ ಆಗಿದೆ. ದೇಶದ ಉನ್ನತಿಗಾಗಿ, ದೇಶದ ಉಳಿವಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾಗಿ ಮೋದಿಯವರನ್ನು ಕಾಣಲು ಈ ಬಾರಿ ನನಗೆ ಬಹುಮತವನ್ನು ನೀಡಿ ಎಂದು ಮನವಿ ಮಾಡಿದರು.
ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲು ಯದುವೀರ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ವಿಶ್ವವೇ ಬೆರಗಾಗುವಂತೆ ದೇಶ ಅಭಿವೃದ್ಧಿಯಾಗುತ್ತಿದೆ. ಕೋಟಿ ಕೋಟಿ ಹಿಂದೂಗಳ ಶತಮಾನಗಳ ಕನಸು ರಾಮಮಂದಿರದ ಮೂಲಕ ನನಸಾಗಿದೆ. ದೇಶಕ್ಕಾಗಿ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ತಾಲ್ಲೂಕು ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಲಪ್ಪ, ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಪ್ರಮುಖರಾದ ರೀನಾ ಪ್ರಕಾಶ್, ಪದ್ಮಿನಿ ಪೊನ್ನಪ್ಪ, ಯಮುನಾ ಚೆಂಗಪ್ಪ, ಕವಿತಾ, ಮಂಜು ಮತ್ತಿತರರು ಉಪಸ್ಥಿತರಿದ್ದರು. ಪ್ರಚಾರ ಸಭೆಯ ಸಂದರ್ಭ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು.










