ಕುಶಾಲನಗರ ಏ.10 NEWS DESK : ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಹೊನ್ನಾರು ಉತ್ಸವ ಆಚರಿಸಿದರು.
ತಾವು ಸಾಕಿರುವ ಹಸು ಎತ್ತುಗಳೊಂದಿಗೆ ಉಳುಮೆಯ ಪರಿಕರಗಳನ್ನು ತೊಳೆದು ಪೂಜಿಸಿದ ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ ಸಾಮೂಹಿಕವಾಗಿ ಉಳುಮೆ ಮಾಡುವ ಎತ್ತುಗಳು ಹಾಗೂ ಹೈನುಗಾರಿಕೆಯ ಆಕಳುಗಳನ್ನು ಪೂಜಿಸಿದರು.
ಇದೇ ಸಂದರ್ಭ ಊರನ್ನು ಕಾಡುತ್ತಿರುವ ಬರವನ್ನು ದೂರ ಮಾಡಿ ಉತ್ತಮ ಮಳೆ ಸುರಿಸಿ ಅನ್ನದಾತರ ಬದುಕನ್ನು ಸಮೃದ್ಧಗೊಳಿಸೆಂದು ಪ್ರಾರ್ಥಿಸಿದರು.
ಕಳೆದ ಒಂದೂವರೆ ವರ್ಷದಿಂದ ಮಳೆಯಾಗದ ಕಾರಣ ಬರ ಆವರಿಸಿದ್ದು, ರೈತರು ಅವಲಂಬಿಸಿರುವ ಕೊಳವೆ ಬಾವಿಗಳು ನೀರಿಲ್ಲದೇ ಬಿಕೋ ಎನ್ನುತ್ತಿವೆ. ಜನ ಹಾಗೂ ಜಾನುವಾರುಗಳಿಗೆ ಎದುರಾಗಿರುವ ಕುಡಿವ ನೀರಿನ ಬವಣೆಯನ್ನು ದೂರ ಮಾಡಿ, ಉತ್ತಮ ಮಳೆ ಸುರಿಸಿ ಮತ್ತೆ ಕೊಳವೆ ಬಾವಿಗಳಲ್ಲಿ ನೀರು ಹರಿಸೆಂದು ದೇವರಲ್ಲಿ ರೈತರು ಪ್ರಾರ್ಥಿಸಿದರು.
ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಗ್ರಾಮದ ಬಸವೇಶ್ವರ ದೇವಾಲಯದಿಂದ ಹೊರಟ ಹೊನ್ನಾರು ಉತ್ಸವ ಗ್ರಾಮದ ಮುಖ್ಯ ಬೀದಿಯಲ್ಲಿ ಸಾಗಿ ದೇವತಾ ಭೂಮಿಯನ್ನು ಒಂದು ಸುತ್ತು ಉಳುಮೆ ಮಾಡಿದವು.
ಕೃಷಿಕ ಎಸ್.ಬಿ.ಲೋಕೇಶ್ ಅವರ ಮೊದಲ ಉಳುಮೆಯೊಂದಿಗೆ ಆರಂಭಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಅನ್ನದಾತರ ಅತ್ಯಂತ ಶ್ರದ್ದೆಯ ಆಚರಣೆಯಾದ ಹೊನ್ನಾರು ಉತ್ಸವವನ್ನು ಗ್ರಾಮದಲ್ಲಿ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಆಧುನಿಕತೆ ಅಟ್ಟಹಾಸ ಮೆರೆದು ಹೊಸ ತಂತ್ರಜ್ಞಾನಗಳು ಎಷ್ಟೇ ಆರ್ಭಟಿಸಿದರೂ ಕೂಡ ನಮ್ಮ ಗ್ರಾಮದಲ್ಲಿ ಎತ್ತುಗಳನ್ನು ಕಟ್ಟಿ ಭೂಮಿಯನ್ನು ಉತ್ತು ಬೀಜಗಳನ್ನು ಬಿತ್ತಿ ಬೆಳೆಯುವ ಪರಂಪರೆ ಹಾಸು ಹೊಕ್ಕಾಗಿದೆ.
ಹೆಚ್ಚು ಕೃಷಿಕರು ಇರುವ ಗ್ರಾಮದಲ್ಲಿ ಹೊನ್ನಾರು ಉತ್ಸವ ಅಂದರೆ ಅದೊಂದು ಗ್ರಾಮೋತ್ಸವದ ಮಾದರಿಯಲ್ಲಿ ಆಚರಿಸಲಾಗುತ್ತದೆ ಎಂದರು.
ಈ ಸಂದರ್ಭ ದೇವಾಲಯ ಸಮಿತಿ ಕಾರ್ಯದರ್ಶಿ ಟಿ.ಎಲ್.ಮಹೇಶ್, ಖಜಾಂಚಿ ಕೆ.ಎಸ್.ಕೃಷ್ಣೇಗೌಡ, ಚಿದಾನಂದ, ತೋಟೇಶ್, ಟಿ.ಜಿ.ಶಿವಣ್ಣ, ಸಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಸಿ.ಶಿವಕುಮಾರ್, ಮಂಜುನಾಥ್ ಹಾಗು ಇತರರು ಹಾಜರಿದ್ದರು.