ಮಡಿಕೇರಿ ಏ.11 NEWS DESK : ಹುಲಿ ಸೆರೆಯ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸಾಕಾನೆ ಮೇಲೆ ಹೆಜ್ಜೇನು ದಾಳಿ ಮಾಡಿದ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ.
ಅರಣ್ಯಾಧಿಕಾರಿ ಕನ್ನಂಡ ರಂಜನ್, ಮಾವುತ ಕುಳ್ಳ ಹಾಗೂ ಸಾಕಾನೆ ಭೀಮನ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ರಂಜನ್ ಅವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಉಳಿದವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೆಜ್ಜೇನು ದಾಳಿ ಸಂದರ್ಭ ಸಾಕಾನೆ ಭೀಮ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಬುಧವಾರ ಹರಿಹರ ಗ್ರಾಮದ ಕೆರೆಯಲ್ಲಿ ಹುಲಿಯೊಂದು ನೀರು ಕುಡಿದು ಕಾಡಿಗೆ ಹೋಗುವ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಸುತ್ತಮುತ್ತಲ ಗ್ರಾಮಸ್ಥರು ಹುಲಿ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಲಿಯ ಚಲನವಲನಗಳನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಮುಂದಾಗಿದ್ದರು. ಇಂದು ಬೆಳಿಗ್ಗೆ ಸಾಕಾನೆಗಳಾದ ಭೀಮ ಹಾಗೂ ಮಹೇಂದ್ರನ ಸಹಾಯದಿಂದ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭ ದಿಢೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ. ಇದೀಗ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಗಾಯಗೊಂಡ ಹುಲಿ ಗ್ರಾಮಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.










