
ಕುಶಾಲನಗರ, ಏ.12 NEWS DESK : ಉತ್ತರ ಕೊಡಗಿನ ಹಾರಂಗಿ ನೀರಾವರಿ ಬಯಲು ಪ್ರದೇಶದಲ್ಲಿರುವ ಜಿಲ್ಲೆಯ ದೊಡ್ಡ ಗ್ರಾಮವೆನಿಸಿದ ಹೆಬ್ಬಾಲೆ ಗ್ರಾಮದಲ್ಲಿ ರೈತರು ಸಂಭ್ರಮ, ಸಾಗರದಿಂದ ಹೊನ್ನಾರು ಉತ್ಸವವನ್ನು ಆಚರಿಸಿದರು.
ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ 50 ಕ್ಕೂ ಹೆಚ್ಚು ಜೋಡಿ ಜಾನುವಾರುಗಳೊಂದಿಗೆ ಕೃಷಿ ಉಪಕರಣಗಳೊಂದಿಗೆ ಆಗಮಿಸಿದ ರೈತರು ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಮಳೆಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ತೆರಳಿದ ಹೊನ್ನಾರು ಉತ್ಸವವು ಗ್ರಾಮದ ಬನಶಂಕರಿ ದೇವಸ್ಥಾನದ ಬಳಿ ಸಮಾಪನಗೊಂಡಿತು.
ನಂತರ ಅಲ್ಲಿಂದ ಶ್ರೀ ಕಾಳಿಕಾಂಭ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿದ ನಂತರ ಹೊನ್ನಾರು ಹೊಂದಿದ್ದ ಎಲ್ಲಾ ರೈತರು ತಮ್ಮ ತಮ್ಮ ಜನೀನುಗಳಿಗೆ ತೆರಳಿ ನೇಗಿಲನ್ನು ಹೂಡಿ ಹೊನ್ನಾರು ಉಳುಮೆಗೆ ಚಾಲನೆ ನೀಡಿದರು.
ಗ್ರಾಮ ದೇವಾಲಯ ಸಮಿತಿ ಅಧ್ಯಕ್ಷ ಯಜಮಾನ್ ಬಸವರಾಜು ಮಾತನಾಡಿ, “ಹೊನ್ನಾರು” ಉಳುಮೆ ಕಾರ್ಯವು ಬರಗಾಲವನ್ನು ತೊಲಗಿಸಿ ರೈತರಲ್ಲಿ ಹೊಸ ಉತ್ಸಾಹ ತರಲಿ ಎಂದು ಆಶಯ ವ್ಯಕ್ತಪಡಿಸಿದರು.
ದೇವಾಲಯ ಸಮಿತಿಯ ಕಾರ್ಯದರ್ಶಿ ರಾಜು, ಖಜಾಂಚಿ ನಾರಾಯಣ್, ಸಮಿತಿ ಸದಸ್ಯರು, ಮಹಿಳೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಯುಗಾದಿ ಹೊಸ ಸಂವತ್ಸರದ ಮೊದಲ ದಿನ. ರೈತರಿಗೆ ಅದು ಹೊಸ ವರ್ಷದ ಬೇಸಾಯದ ಆರಂಭದ ಶುಭ ದಿನ.
ಯುಗಾದಿಯ ದಿನ ರೈತರು ಹೊನ್ನಾರು ಉತ್ಸವದ ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸುತ್ತಾರೆ.
ಚಂದ್ರಮಾನ ಯುಗಾದಿಯಂದು ಹೊಸ ವರುಷದ ಪ್ರಯುಕ್ತ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ‘ಹೊನ್ನಾರು ಉತ್ಸವ’ವು ರೈತರ ಪಾಲಿಗೆ ಸಡಗರದ ದಿನ. ಆದರೆ, ಈ ವರ್ಷ ವರುಣನ ಅವಕೃಪೆಗೆ ಒಳಗಾಗಿದ್ದು, ಇದುವರೆಗೂ ಮಳೆಯಾಗದ ಕಾರಣ ಬಿಸಿಲಿನ ಧಗೆಗೆ ಜಲಮೂಲಗಳು ಬತ್ತಿಹೋಗಿವೆ. ಗಿಡಮರಗಳು ಒಣಗಿ ನಿಂತಿವೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ರೈತಾಪಿ ಜನ ತಮ್ಮ ಆತಂಕವನ್ನು ದೂರ ಮಾಡು ಎಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಹೊನ್ನಾರು ಉತ್ಸವವನ್ನು ಆಚರಿಸಿದರು.









