
ಮಡಿಕೇರಿ ಏ.12 NEWS DESK : ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಇರುವುದರಿಂದ ಏ.26 ರಂದು ನಡೆಯುವ ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದೆ ಇರಲು ನಿರ್ಧರಿಸಿದ್ದೇವೆ ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರ ಮಂದಿ ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಜನರಿದ್ದು, ಎಲ್ಲರೂ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ ಎಂದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಜಾತಿ ಬಾಂಧವರಿಗೆ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ. ಆದ್ದರಿಂದ “ಆದಿ ದ್ರಾವಿಡ” ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರÀ ಕ್ರಮ ಕೈಗೊಳ್ಳಬೇಕೆಂದು ಕಳೆದ ಅನೇಕ ವರ್ಷಗಳಿಂದ ಸಂಘಟನೆ ಮೂಲಕ ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರಕಾರ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ತಾಲ್ಲೂಕು ಕಚೇರಿಗಳಿಗೆ ಆದೇಶ ಮಾಡಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಇಲ್ಲಿಯವರೆಗೆ “ಆದಿ ದ್ರಾವಿಡ” ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ದೊರೆತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಬಳಿ ಈ ಬಗ್ಗೆ ನಾವು ಪ್ರಶ್ನಿಸಿದರೆ ಸರಕಾರದ ಬಳಿ ಹೋಗಿ ಸರಿಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದಿ ದ್ರಾವಿಡ ಜನಾಂಗದ ನೋವನ್ನು ಅರಿತುಕೊಳ್ಳುತ್ತಿಲ್ಲ. ಇಂದಿಗೂ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡುತ್ತಿರುವುದರಿಂದ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಸರಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಕುಂದಾಪುರ ಸೇರಿದಂತೆ ಇತರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 9 ಲಕ್ಷ ಸಮುದಾಯ ಜನ ಇದ್ದು, `ಆದಿ ದ್ರಾವಿಡ’ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ `ಆದಿ ದ್ರಾವಿಡ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಸೋಮಪ್ಪ ಒತ್ತಾಯಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಆದಿ ದ್ರಾವಿಡ ಜಾತಿ ಬಾಂಧವರು ಸುಮಾರು ಮಂದಿ ಇದ್ದಾರೆ. ಇವರಿಗೆ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತಪ್ಪಾಗಿ ಜಾತಿ ನಮೂದು ಮಾಡುತ್ತಿರುವುದರಿಂದ ಆದಿದ್ರಾವಿಡ ಜನಾಂಗದ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ವಿವಾಹ ಸಂಬಂಧಗಳಿಗೆ ತುಂಬಾ ತೊಂದರೆಯಾಗುತ್ತಿದೆ ಮತ್ತು ಆದಿದ್ರಾವಿಡ ಸಮುದಾಯ ಸೌಲಭ್ಯದಿಂದ ವಂಚಿತವಾಗುತ್ತಿದೆ. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಮೂಹಕ್ಕೆ ಸಮರ್ಪಕವಾಗಿ `ಆದಿ ದ್ರಾವಿಡ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಬಂದು ನೆಲೆಸಿರುವ ಆದಿ ದ್ರಾವಿಡ ಸಮುದಾಯಕ್ಕೆ ತಪ್ಪಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆಗಳು ಯಾವುದೂ ಈಡೇರುತ್ತಿಲ್ಲ ಎಂದು ಸೋಮಪ್ಪ ಆರೋಪಿಸಿದರು.
ಕೇವಲ ಚುನಾವಣೆ ಸಂದರ್ಭ ಮತಗಳಿಕೆಗಾಗಿ ಮಾತ್ರ ಆದಿ ದ್ರಾವಿಡ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
:: ನಿವೇಶನ ನೀಡಲು ಒತ್ತಾಯ ::
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಸೇರಿದ ಮಂದಿ ನಿವೇಶನದ ಕೊರತೆಯನ್ನು ಎದುರಿಸುತ್ತಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಮತ್ತಿತರ ಕಾರ್ಮಿಕ ವರ್ಗ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೊಡಗಿನ ಸರ್ಕಾರಿ ಪೈಸಾರಿ ಜಮೀನಿನ ಸಮಗ್ರ ಸರ್ವೆ ಮಾಡಿಸಬೇಕು. ಕೊಡಗಿನವರೇ ಆದ ಬುಡಕಟ್ಟು ಜನರು, ಭೂರಹಿತ ಸೈನಿಕರು, ವಿಧವೆಯರು ಮತ್ತಿತರ ಅರ್ಹರಿಗೆ ಹಂಚಬೇಕು ಎಂದು ಒತ್ತಾಯಿಸಿದರು.
ಬೆಳೆಗಾರರ ಸ್ವಾಧೀನದಲ್ಲಿರುವ ಸರಕಾರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವ ಯೋಜನೆಗೆ ನಮ್ಮ ವಿರೋಧವಿದ್ದು, ತಕ್ಷಣ ಗುತ್ತಿಗೆ ಆಧಾರದಲ್ಲಿ ಜಮೀನು ನೀಡುವ ಪ್ರಕ್ರಿಯೆಯನ್ನು ಸರಕಾರ ರದ್ದುಗೊಳಿಸಬೇಕೆಂದು ಸೋಮಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ.ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಧು ಹಾಗೂ ಕುಂಬೂರು ಹೋಬಳಿ ಅಧ್ಯಕ್ಷ ವೆಂಕಪ್ಪ ಉಪಸ್ಥಿತರಿದ್ದರು.







