
ಮಡಿಕೇರಿ ಏ.12 NEWS DESK : ಸರಕಾರಿ ಜಮೀನುಗಳಲ್ಲಿ ಅನಧೀಕೃತವಾಗಿ ಕೃಷಿ ಮಾಡುತ್ತಿರುವವರಿಗೆ ಗುತ್ತಿಗೆ ಆಧಾರದಲ್ಲಿ ಸರಕಾರಿ ಜಾಗವನ್ನು ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಏ.15ರಂದು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭೂ-ಗುತ್ತಿಗೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆ, ಆದಿವಾಸಿ, ಮೂಲ ನಿವಾಸಿ ಸಂಘಟನೆಯ ಪ್ರಮುಖರು ಹಾಗೂ ಪದಾಧಿಕಾರಿಗಳು ಒಳಗೊಂಡು ಕೊಡಗಿನ ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಏ.15 ರಂದು ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಏಕಕಾಲದಲ್ಲಿ ಪ್ರತಿಭಟನೆ ನಡೆಸಿ, ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗುವುದೆಂದರು.
ರಾಜ್ಯ ಸರ್ಕಾರ ತರಾತುರಿಯಲ್ಲಿ ಕಾನೂನಿಗೆ ತಿದ್ದುಪಡಿ ತಂದಿದ್ದು, ಕಲಂ 94(ಇ)ಯನ್ನು ಹೊಸದಾಗಿ ಸೇರಿಸಲಾಗಿದೆ. ಇದರಿಂದ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಕೃಷಿ ಮಾಡುತ್ತಿರುವವರಿಗೆ ಅಂತಹ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಕರ್ನಾಟಕ ಭೂಕಂದಾಯ ಅಧಿನಿಯಮ 1964ಕ್ಕೆ ತಿದ್ದುಪಡಿ ತಂದಿರುವುದು ಸರಿಯಲ್ಲ ಎಂದರು.
ಈ ಆದೇಶದಿಂದ ಕೊಡಗಿನ ಭೂರಹಿತ, ಆದಿವಾಸಿ, ದಲಿತ, ಭೂರಹಿತ ಅಲ್ಪಸಂಖ್ಯಾತ, ಭೂರಹಿತ ಹಿಂದುಳಿದ ವರ್ಗ ಹಾಗೂ ಭೂಮಿ ಇಲ್ಲದ ಸಣ್ಣ ಮತ್ತು ಅತಿಸಣ್ಣ ರೈತರಿಗೆ, ಭೂ ರಹಿತ ಬಡವರಿಗೆ ತೀವ್ರ ಅನ್ಯಾಯವಗಲಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಜಮೀನನ್ನು ಭೂರಹಿತರಿಗೆ ಫಾರಂ ನಂ.57 ರಲ್ಲೇ ನೀಡಲು ಸರ್ಕಾರ ಮುಂದಾಗಬೇಕೆಂದು ಗಾಯತ್ರಿ ನರಸಿಂಹ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಾರ್ಪೊರೇಟ್‌ಗಳು, ಅತೀ ದೊಡ್ಡ ಭೂಮಾಲೀಕರು, ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸಿ, ಬಡವರಿಗೆ ಹಂಚಬೇಕು, ಭೂರಹಿತ ಆದಿವಾಸಿ, ದಲಿತ ಸಮುದಾಯ, ಭೂರಹಿತ ಒ.ಬಿ.ಸಿ, ಹಿಂದುಳಿದ ವರ್ಗ, ಸಣ್ಣ ಮತ್ತು ಅತಿಸಣ್ಣ ರೈತರಿಗೆ, ಭೂ ರಹಿತರಿಗೆ ಭೂಮಿಯನ್ನು ನೀಡಬೇಕು, ಈಗಾಗಲೇ ಜಾರಿಯಲ್ಲಿರುವ ಭೂ ಹಂಚಿಕೆ ನಿಯಮದಂತೆ ಹಾಗೂ ಸರ್ಕಾರ ನಿಯಮಿಸಿರುವ ಅಕ್ರಮ ಸಕ್ರಮ ಸಮಿತಿಯ ಅಡಿ ಬಾಕಿ ಇರುವ ಫಾರಂ ನಂ.57 ಕಡತಗಳನ್ನು ವಿಲೇವಾರಿ ಮಾಡಬೇಕು, ನಿವೇಶನ ಇಲ್ಲದವರಿಗೆ ಕೃಷಿ ಭೂಮಿ ಮತ್ತು ನಿವೇಶನ ನೀಡಬೇಕು, ಸಣ್ಣ ಬೆಳೆಗಾರರು 2/3 ಏಕರೆ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವವರಿಗು ತಲಾ 5 ಏಕರೆ ಸರ್ಕಾರಿ ಭೂಮಿಯನ್ನ ಹಂಚಬೇಕು, ಹೊಳೆಕೆರೆ, ಪೈಸಾರಿ, ಅರಣ್ಯದಂಚಿನಲ್ಲಿ ವಾಸ ಮಾಡುವ ಬಡವರಿಗೆ ತಕ್ಷಣ ಬದಲಿ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲಾ ಭೂ ರಹಿತ ಬಂಧುಗಳು, ಸಂಘಟನೆಯ ಪದಾಧಿಕಾರಿಗಳು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
