ಮಡಿಕೇರಿ ಏ.15 NEWS DESK : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬೀರುಗ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬೀರುಗ ಗ್ರಾಮದ ಅಯ್ಯಮಾಡ ಮಾದಯ್ಯ(63) ಎಂಬುವವರೇ ಸಾವನ್ನಪ್ಪಿರುವ ದುರ್ದೈವಿ. ಇಂದು ಬೆಳಗ್ಗೆ ಮಾದಯ್ಯ ಅವರು ಗ್ರಾಮದ ಚಾಮುಂಡಿ ಮುತ್ತಪ್ಪ ಕೊಲ್ಲಿ ರಸ್ತೆಯ ಮೂಲಕ ತೆರಳುತ್ತಿದ್ದ ಸಂದರ್ಭ ಕಾಡಾನೆ ಇವರ ಮೇಲೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
::: ತೀವ್ರ ಅಸಮಾಧಾನ :::
ಘಟನಾ ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಅಧಿಕಾರಿಗಳು ಬರುವವರೆಗೆ ಮೃತದೇಹವನ್ನು ಸ್ಥಳದಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಇಂದಿನಿAದಲೇ ಕಾರ್ಯಾಚರಣೆ ಆರಂಭಿಸಿ, ನಾಡಿನಿಂದ ಕಾಡಿಗೆ ಆನೆಗಳನ್ನು ಅಟ್ಟುವಂತೆ ತಾಕೀತು ಮಾಡಿದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸಮ್ಮತಿಯನ್ನು ಸೂಚಿಸಿದರು.
ರೈತ ಸಂಘದ ಮುಖಂಡರಾದ ಅಜ್ಜಮಾಡ ಚಂಗಪ್ಪ ಅವರು ಮಾತನಾಡಿ, ಬೀರುಗ ಹಾಗೂ ಕುರ್ಚಿ ಭಾಗದಲ್ಲಿ 40ಕ್ಕೂ ಹೆಚ್ಚು ಕಾಡನೆಗಳು ವಿವಿಧ ತೋಟಗಳಲ್ಲಿ ಬೀಡು ಬಿಟ್ಟಿದ್ದು, ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೃಷಿಕರು, ಕಾರ್ಮಿಕರು ಇಲ್ಲಿ ಬದುಕುವುದೇ ಕಷ್ಟವಾಗಿದೆ. ವನ್ಯಪ್ರಾಣಿಗಳ ಉಪಟಳದಿಂದ ಈ ಭಾಗದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಮಾದಯ್ಯ ಅವರ ಕುಟುಂಬಕ್ಕೆ ಡಿ.ಎಫ್.ಓ. ಭಾಸ್ಕರ್ ಅವರು ಪರಿಹಾರದ ಚೆಕ್ ಹತ್ತಾಂತರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಎ.ಸಿ.ಎಫ್. ನೆಹರು, ರೈತ ಸಂಘದ ಪ್ರಮುಖರು ಹಾಜರಿದ್ದರು.