
ಮಡಿಕೇರಿ ಏ.17 NEWS DESK : ಹುದಿಕೇರಿ ಮಹಾದೇವರ ವಾರ್ಷಿಕ ಉತ್ಸವ ಇದೇ ಏ.21 ಮತ್ತು 22ರಂದು ನಡೆಯಲಿದ್ದು, ಏ.14ರಂದು ಕೊಡಿಮರ ನಿಲ್ಲಿಸುವ ಮೂಲಕ ಈ ಬಾರಿ 9ದಿನಗಳ ಹಬ್ಬಕ್ಕೆ ಚಾಲನೆ ನೀಡಲಾಗಿದೆ.
ಏ.21ರಂದು ನೆರ್ಪು ಹಾಗೂ 22ರಂದು ಸಂಜೆ 7-30ಗಂಟೆಗೆ ದೇವರ ಅವಭೃತ ಸ್ನಾನ ನಡೆಯಲಿದೆ.
ವರ್ಷ 11 ದಿವಸ ಹಬ್ಬವನ್ನು ನಡೆಸಿಕೊಂಡು ಬರಲಾಗುತ್ತಿದ್ದು ಪ್ರತಿ ಮೂರು ವರ್ಷಗಳಿಗೊಮ್ಮೆ ಹುದಿಕೇರಿ ಹಾಗೂ ಕುತ್ತ್’ನಾಡ್ ಮಹಾದೇವರ ಅವಭೃತ ಸ್ನಾನ ಒಂದೇ ಸ್ಥಳದಲ್ಲಿ ಆಗುವುದು ಈ ಹಿಂದಿನಿಂದಲೂ ಬೆಳೆದು ಬಂದಿರುವ ಆಚರಣೆಯಾಗಿದ್ದು, ಕಾರಣಾಂತರಗಳಿಂದ ಕಳೆದ ಏಳು ವರ್ಷ ಜೊತೆಯಲ್ಲಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಹಿಂದಿನ ಆಚರಣೆಯನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಹಾಗೂ ಊರು ತಕ್ಕರಾದ ಬೊಳ್ಳಜ್ಜೀರ ಮಣಿ ನಂಜಪ್ಪನವರಿಗೆ ದೇವರು ಕನಸಿನಲ್ಲಿ ಕಾಣಿಸಿಕೊಂಡು ಹಿಂದಿನ ಆಚರಣೆಗಳನ್ನು ಪಾಲಿಸುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಸೀಮಿತವಾಗಿ ಹಬ್ಬವನ್ನು ಒಂಬತ್ತು ದಿನಗಳಿಗೆ ಮೊಟಕುಗೊಳಿಸಲಾಗಿದೆ. ಮುಂದಿನ ವರ್ಷದಿಂದ 11 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಾಹಿತಿ ಅಂಜಿಕೇರಿ ನಾಡಿನ ಜೋಡಿ ತಕ್ಕರಾದ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಹಾಗೂ ಚಕ್ಕೇರ ರಾಜೇಶ್ ನೀಡಿದರು.
ಈ ಬಾರಿ ಕುತ್ತ್’ನಾಡ್ ಹೊಳೆಯಲ್ಲಿ ಎರಡು ಊರಿನ ದೇವರುಗಳ ಅವಭೃತ ಸ್ನಾನದ ಬಳಿಕ ವಿವಿಧ ಆಚರಣೆಗಳು ಎಂದಿನಂತೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಊರು ತಕ್ಕರಾದ ಬೊಳ್ಳಜ್ಜೀರ ಮಣಿ ನಂಜಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.







