ವಿರಾಜಪೇಟೆ ಅ.22 NEWS DESK : ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆದ ನವರಾತ್ರಿ ಪೂಜಾ ಮಹೋತ್ಸವವು ಸಾಂಗವಾಗಿ ಸಂಪನ್ನಗೊಂಡಿತು. ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಅಲಂಕಾರ ಸೇವೆ ಹಾಗೂ ಮಹಾಪೂಜೆಗಳು ಭಕ್ತಿಪೂರ್ವಕವಾಗಿ ನೆರವೇರಿದವು. ಒಂಬತ್ತು ದಿನಗಳ ಕಾಲ ಶ್ರೀ ದೇವಿಗೆ ವೈವಿಧ್ಯಮಯ ಅಲಂಕಾರಗಳನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ಸವಕ್ಕೆ ಆಗಮಿಸಿದ ನೂರಾರು ಭಕ್ತಾದಿಗಳಿಗೆ ಪ್ರತಿದಿನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿದ ಮುತ್ತೈದೆಯರಿಗೆ ಅರಿಶಿನ-ಕುಂಕುಮ ಹಾಗೂ ತಾಂಬೂಲ ನೀಡಿ ಗೌರವಿಸಲಾಯಿತು. ಒಂಬತ್ತು ದಿನಗಳ ಕಾಲ ನಡೆದ ಧಾರ್ಮಿಕ ಉತ್ಸವದಲ್ಲಿ ವಿರಾಜಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವಿಯ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

















