ಮಡಿಕೇರಿ ಏ.21 NEWS DESK : ಕೇಂದ್ರ ಸರಕಾರವನ್ನು ವಿನಾಕಾರಣ ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಜಾಹೀರಾತು ಅತ್ಯಂತ ಕೀಳುಮಟ್ಟದಿಂದ ಕೂಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ದೇಶದ ಜನರೇ ಚೊಂಬು ನೀಡಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ತಿರುಗೇಟು ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಕೀಯ ಯಾವಾಗಲೂ ಆರೋಗ್ಯಕರವಾಗಿರಬೇಕು, ಆದರೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಅತ್ಯಂತ ಕ್ಷುಲ್ಲಕ ರಾಜಕಾರಣವನ್ನು ಪ್ರದರ್ಶಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಲವು ಹಗರಣಗಳ ಮೂಲಕ ಬೊಕ್ಕಸವನ್ನು ಬರಿದು ಮಾಡಿ ದೇಶದ ಜನರಿಗೆ ಖಾಲಿ ಚೊಂಬು ನೀಡಿತ್ತು. ಅದನ್ನು ತುಂಬಲು ಪ್ರಧಾನಮಂತ್ರಿ ನರೇಂದ್ರಮೋದಿ ಅವರೇ ಬರಬೇಕಾಯಿತು. ಈ ದೇಶದ ಜನರಿಗೆ ಕಾಂಗ್ರೆಸ್ ನೀಡಿದ ಖಾಲಿ ಚೊಂಬನ್ನು ಮೋದಿಯವರು ಭರ್ತಿ ಮಾಡಿದರು ಎಂದು ಖುದ್ದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಹಗರಣಗಳನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ಸಿಗರು ಮೊದಲು ತಮ್ಮ ಹೆಗಲನ್ನು ತಾವು ನೋಡಿಕೊಳ್ಳಲಿ ಎಂದು ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವಂತೆ ಪ್ರಧಾನಿ ನರೇಂದ್ರಮೋದಿ ಅವರು 10 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ದೇಶವನ್ನು ಸುರಕ್ಷಿತವಾಗಿಟ್ಟು ಶ್ರೀಮಂತಗೊಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕಾಗಿ ಲಸಿಕೆಯನ್ನು ಪರಿಚಯಿಸಿ ಕೋಟ್ಯಾಂತರ ಜನರ ಜೀವ ಉಳಿಸಿದ್ದಾರೆ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿದ್ದಾರೆ. ಕಳೆದ 60 ವರ್ಷಗಳ ಕಾಲ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಮೋದಿ ಅವರ ನೇತೃತ್ವದ ಸರಕಾರ 10 ವರ್ಷಗಳಲ್ಲಿ ಮಾಡಿದೆ. 40 ಕ್ಕೂ ಹೆಚ್ಚು ನೀತಿಗಳನ್ನು ರೂಪಿಸಿ ದೇಶದ ಆರ್ಥಿಕತೆಯನ್ನು ಬಲ ಪಡಿಸಿದ್ದಾರೆ. ಭ್ರಷ್ಟಾಚಾರ ಮತ್ತು ನಕಲಿ ನೋಟುಗಳನ್ನು ತಡೆಯಲು ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಷ್ಠಾನ, ಜನ್ ಧನ್, ಆಧಾರ್ ಯೋಜನೆ ಜಾರಿಗೆ ತಂದಿದೆ. ತ್ರಿವಳಿ ತಲಾಖ್ ಪದ್ಧತಿಯನ್ನು ಕೊನೆಗೊಳಿಸಿ, ಲಕ್ಷಾಂತರ ಮುಸ್ಲಿಂ ತಾಯಂದಿರು ಹಾಗೂ ಸಹೋದರಿಯರಿಗೆ ನ್ಯಾಯ ಒದಗಿಸಿದ್ದಾರೆ. ಇದನ್ನು ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಯಾಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. 2013-14ರಲ್ಲಿ ದೇಶದಲ್ಲಿ 91 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳಿದ್ದವು, ಇದು 2023ರಲ್ಲಿ 1.45ಲಕ್ಷ ಕಿಲೋಮೀಟರ್ ಗೆ ಏರಿಕೆಯಾಗಿದೆ. ಹೆದ್ದಾರಿಗಳ ನಿರ್ಮಾಣದ ವೇಗವು ದಿನಕ್ಕೆ 11.6 ಕಿ.ಮೀ ನಿಂದ 28 ಕಿ.ಮೀ. ಗೆ ಏರಿಕೆಯಾಗಿದೆ. ನಾಲ್ಕು ಸಾವಿರವಿದ್ದ ಮೇಲು ಸೇತುವೆಗಳು ಪ್ರಸ್ತುತ 11 ಸಾವಿರಕ್ಕೆ ಏರಿಕೆಯಾಗಿದೆ. ಮೊದಲು ಕೇವಲ ಐದು ಮೆಟ್ರೋ ಸಿಟಿಗಳಿದ್ದವು, ಈಗ ಈ ಸಂಖ್ಯೆ 20 ಕ್ಕೆ ತಲುಪಿದೆ, ಇಂದು ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 150 ಕ್ಕೆ ಏರಿದೆ. ಇದೆಲ್ಲವೂ ಅಭಿವೃದ್ಧಿಯಲ್ಲವೇ, ಈ ಬಗ್ಗೆ ಕಾಂಗ್ರೆಸ್ಸಿಗರಿಗೆ ಅರಿವಿಲ್ಲವೇ ಅಥವಾ ಅಸೂಯೆಯೇ ಎಂದು ಸುಬ್ರಮಣ್ಯ ಉಪಾಧ್ಯಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲಿನ ಹಣವನ್ನು ಕಾಲಕಾಲಕ್ಕೆ ಕೇಂದ್ರ ಬಿಡುಗಡೆ ಮಾಡುತ್ತಲೇ ಬಂದಿದೆ. ರೈತಾಪಿ ವರ್ಗಕ್ಕೆ, ಅವರ ಮಕ್ಕಳಿಗೆ ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶವ್ಯಾಪಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ರಾಜ್ಯದಲ್ಲೂ ಆಗಿದೆ. ಮೈಸೂರು- ಬೆಂಗಳೂರು ದಶಪಥ ರಸ್ತೆಯಲ್ಲಿ ಕಾಂಗ್ರೆಸ್ಸಿಗರು ಕೂಡ ಸಂಚರಿಸುತ್ತಾರಲ್ಲವೇ ಎಂದು ಪ್ರಶ್ನಿಸಿರುವ ಅವರು, ಮೊದಲು ಕಾಂಗ್ರೆಸ್ಸಿಗರು ಕೀಳು ಮಟ್ಟದ ರಾಜಕಾರಣವನ್ನು ಮಾಡುವುದನ್ನು ಬಿಟ್ಟು ದೇಶದ ಭದ್ರತೆ, ಅಭಿವೃದ್ಧಿ ಮತ್ತು ಪ್ರಜೆಗಳ ಸುರಕ್ಷತೆ ಬಗ್ಗೆ ಚಿಂತಿಸಲಿ ಎಂದು ತಿಳಿಸಿದ್ದಾರೆ.