
ಮಡಿಕೇರಿ ಏ.23 NEWS DESK: ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಮೇ 4 ಮತ್ತು 5 ರಂದು ಕೊಡಗಿನ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಪಂದ್ಯಾವಳಿ-2024 ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಅಧ್ಯಕ್ಷ ನೆರವಂಡ ಜಿ.ಜೀವನ್ ಹಾಗೂ ಕ್ರೀಡಾ ಸಮಿತಿ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
ಪಂದ್ಯಾವಳಿ 11, 13, 15, 17 ಮತ್ತು 19 ವರ್ಷದೊಳಗಿನ ಬಾಲಕ, ಬಾಲಕಿಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಹಾಗೂ 15 ಮತ್ತು 19 ವರ್ಷದ ಬಾಲಕ, ಬಾಲಕಿಯರಿಗಾಗಿ ಮಿಶ್ರ ಡಬಲ್ಸ್ ಪಂದ್ಯಾವಳಿ ನಡೆಯಲಿದೆ.
ಪಂದ್ಯಾವಳಿಯ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ಆಕರ್ಷಕ ನಗದು, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಬಿಎಐ ಮತ್ತು ಕೆಬಿಎ ಬ್ಯಾಡ್ಮಿಂಟನ್ ನಿಯಮಗಳಂತೆ ಪಂದ್ಯಾವಳಿ ನಡೆಯಲಿದ್ದು, ಅಂಡರ್ 11-2014, 13-2012, 15-2010, 17-2008 ಹಾಗೂ ಅಂಡರ್-19-2006 ಜನಿಸಿದ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಯೊನೆಕ್ಸ್ ಮಾವಿಸ್ 350 ಶಟಲ್‌ಗಳನ್ನು ಪಂದ್ಯಾವಳಿಗೆ ಬಳಸಲಾಗುವುದು. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ತಂಡಗಳ ನೋಂದಣಿಗೆ ಮೇ 1 ಕೊನೆಯ ದಿನವಾಗಿದೆ. ಪ್ರವೇಶ ಶುಲ್ಕ ಸಿಂಗಲ್ಸ್ ಗೆ ರೂ.300, ಡಬಲ್ಸ್ ಗೆ ರೂ.600 ನಿಗಧಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ಜ್ಯೋತಿ ಸೋಮಯ್ಯ-7483716274 ಸಂಪರ್ಕಿಸಬಹುದಾಗಿದೆ ಎಂದು ಜಯ ಚಿಣ್ಣಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷೆ ಜ್ಯೋತಿ ಸೋಮಯ್ಯ, ಗೌರವ ಕಾರ್ಯದರ್ಶಿ ಅನಿಲ್ ಲೋಬೋ, ಸಹ ಕಾರ್ಯದರ್ಶಿ ಸುಮತಿ ವಿಶ್ವನಾಥನ್ ಹಾಗೂ ಮಾಜಿ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಉಪಸ್ಥಿತರಿದ್ದರು. ಇದೇ ಸಂದರ್ಭ ಪಂದ್ಯಾವಳಿಯ ಭಿತ್ತಿಪತ್ರವನ್ನು ಆಯೋಜನಕರು ಬಿಡುಗಡೆಗೊಳಿಸಿದರು.









