
ಮಡಿಕೇರಿ ಏ.24 NEWS DESK : ವಿರಾಜಪೇಟೆಯ ತೋರ ಗ್ರಾಮದಲ್ಲಿ ಹಾಕಿ ಮೈದಾನಕ್ಕಾಗಿ ಸುಮಾರು ಐದೂವರೆ ಎಕರೆ ಭೂಮಿ ಕಾಯ್ದಿರಿಸಿ ಮಂಜೂರಾತಿಗಾಗಿ ಸಹಕಾರ ನೀಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಕೊಡವ ಹಾಕಿ ಹಾಕಿ ಅಕಾಡೆಮಿ ಸನ್ಮಾನಿಸಿ ಗೌರವಿಸಿತು
ವಿರಾಜಪೇಟೆಯಲ್ಲಿ ಶಾಸಕರ ಗೃಹ ಕಚೇರಿಯಲ್ಲಿ ಭೇಟಿಯಾದ ಹಾಕಿ ಅಕಾಡೆಮಿ ಪ್ರಮುಖರು ಪೊನ್ನಣ್ಣ ಅವರಿಗೆ ಧನ್ಯವಾದ ಪತ್ರ ಸಲ್ಲಿಸಿ ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ ಅವರು ಕೊಡಗಿನ ಕ್ರೀಡಾ ಪ್ರತಿಭೆಗಳು ಐದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುವ ಮೈದಾನದ ಸದುಪಯೋಗ ಪಡೆದುಕೊಂಡು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಲಿ ಎಂದು ಶುಭ ಹಾರೈಸಿದರು.
ಕೊಡವ ಹಾಕಿ ಅಕಾಡೆಮಿಯ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಅವರು ಮಾತನಾಡಿ 1997 ರಲ್ಲಿ ಸ್ಥಾಪಿಸಲ್ಪಟ್ಟ ಕೊಡವ ಹಾಕಿ ಅಕಾಡೆಮಿ ಸಾವಿರಾರು ಹಾಕಿ ಪ್ರತಿಭೆಗಳನ್ನು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದರು.
ಹಿರಿಯರಾದ ಪಾಂಡಂಡ ಕುಟ್ಟಣಿ ಅವರು ಆರಂಭಿಸಿದ ಕೊಡವ ಕುಟುಂಬ ತಂಡಗಳ ನಡುವಿನ ಹಾಕಿ ಹಬ್ಬದಲ್ಲಿ ಆರಂಭದಲ್ಲಿ 56 ತಂಡಗಳು ಪಾಲ್ಗೊಂಡಿದ್ದವು. ವರ್ಷದಿಂದ ಈ ಸಂಖ್ಯೆ ಹೆಚ್ಚಾಗಿ ಇದೀಗ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ ವಿಶ್ವ ದಾಖಲೆಯ 360 ತಂಡಗಳು ಪಾಲ್ಗೊಂಡಿರುವುದು ವಿಶೇಷವಾಗಿದೆ.
ಪ್ರತಿವರ್ಷ ಹಾಕಿಹಬ್ಬ ನಡೆಸುವಾಗಲೂ ಮೈದಾನಕ್ಕಾಗಿ ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ಹಾಕಿ ಹಬ್ಬಕ್ಕೆ ಶಾಶ್ವತವಾದ ಮತ್ತು ಸುಸಜ್ಜಿತವಾದ ಮೈದಾನ ಬೇಕು ಎನ್ನುವ ಬೇಡಿಕೆಯನ್ನು ಕೊಡವ ಹಾಕಿ ಅಕಾಡೆಮಿ ಇಟ್ಟ ಕಾರಣ ಶಾಸಕ ಪೊನ್ನಣ್ಣ ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ತೋರಾ ಗ್ರಾಮದಲ್ಲಿ ಐದೂವರೆ ಎಕರೆ ಜಮೀನು ಮಂಜೂರಾತಿಗೆ ಕ್ರಮ ಕೈಗೊಂಡಿದ್ದಾರೆ. ಶಾಸಕರ ಈ ಸಹಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಕೊಡವ ಹಾಕಿ ಹಬ್ಬ ಎಲ್ಲಾ ಜಾತಿ, ಧರ್ಮದವರಿಗೂ ಪ್ರೇರಣೆಯಾಗಿ ಎಲ್ಲರೂ ಕೌಟುಂಬಿಕ ಕ್ರೀಡಾಕೂಟಗಳನ್ನು ಆಯೋಜಿಸಿ ಸೌಹಾರ್ಧತೆಯನ್ನು ಮೆರೆಯುತ್ತಿದ್ದಾರೆ. ಇದು ಅತ್ಯಂತ ಸಂತೋಷದ ಮತ್ತು ಹೆಮ್ಮೆಯ ಬೆಳವಣಿಗೆಯಾಗಿದೆ ಎಂದು ಬೋಪಣ್ಣ ಹರ್ಷ ವ್ಯಕ್ತಪಡಿಸಿದರು.
ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ ಹಾಗೂ ಎಲ್ಲಾ ನಿರ್ದೇಶಕರುಗಳು ಈ ಸಂದರ್ಭ ಹಾಜರಿದ್ದರು.









