ಮಡಿಕೇರಿ ಮೇ 11 NEWS DESK : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಮೇ 18ರಂದು ರೋಟರಿ ಜಿಲ್ಲೆಯ ವತಿಯಿಂದ ಒಂದು ದಿನದ ಜಿ-20 ಯೋಗ ಶೃಂಗಸಭೆ ನಡೆಯಲಿದೆ ಎಂದು ರೋಟರಿ ಜಿಲ್ಲಾ ಯೋಗ ಹಾಗೂ ಧ್ಯಾನ ಸಮಿತಿ ಸದಸ್ಯ ಬಿ.ಜಿ.ಅನಂತಶಯನ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗ ಪ್ರಚಾರವು ವಿಶ್ವದ ಎಲ್ಲೆಡೆ ಹಾಗೂ ಎಲ್ಲ ವರ್ಗದಲ್ಲೂ ನಡೆಯುವ ಅವಶ್ಯಕತೆ ಇರುವದರಿಂದ ಯೋಗ ಶಾಲಾ ಶಿಕ್ಷಕರು ಯೋಗಪಟುಗಳು ಹಾಗೂ ಆಸಕ್ತರೂ ಭಾಗವಹಿಸುವಂತೆ ಕೋರಿದರು.
ಶೃಂಗ ಸಭೆಯಲ್ಲಿ ಪದ್ಮಶ್ರೀ ಡಾ.ನಾಗೇಂದ್ರ, ದೇಶಿ ಕೇಂದ್ರ ಮಹಾಸ್ವಾಮಿಗಳು, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಅರಳುಮಲ್ಲಿಗೆ ಪಾರ್ಥಸಾರತಿ, ಆಯುಷ್ ಆಯುಕ್ತರು ಜಿ-20 ದೇಶಗಳ ಶೆರ್ಪಾ- (ಬ್ರೆಜಿಲ್) ಹಾಗೂ ಇತರರು ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದು, ಸಭಿಕರೊಡನೆ ಮಾತುಕತೆ ನಡೆಸಲಿದ್ದಾರೆ ಎಂದರು.
ಶೃಂಗ ಸಭೆಯ ಉದ್ದೇಶ ವಿಶ್ವದಲ್ಲಿ ಯೋಗವನ್ನು ಜನಪ್ರಿಯಗೊಳಿಸುವುದು, ಯೋಗ ಕೇಂದ್ರಗಳನ್ನು ಆರಂಭಿಸುವುದು, ಆರೋಗ್ಯ ಪ್ರವಾಸೋದ್ಯಮ ಉತ್ತೇಜಿಸುವುದು ಆಗಿದೆ.
ರೋಟರಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ, ಪ್ರತಿ ಜಿಲ್ಲೆಗಳಲ್ಲೂ ಯೋಗ ಶೃಂಗ ಸಭೆಯನ್ನು ಏರ್ಪಡಿಸುತ್ತಿದೆ. ಇದಲ್ಲಿ ರೋಟರಿಯ ಸುಮಾರು ಎರಡು ಲಕ್ಷ ಕುಟುಂಬಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಮೆ 18 ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಯೋಗ ತಜ್ಞರು ಮತ್ತು ಅತಿಥಿಗಳು ಯೋಗ ಮತ್ತು ಧ್ಯಾನದ ಮೂಲಕ ವೈಯಕ್ತಿಕ ಸ್ವಾಸ್ಥ್ಯ, ವೃತ್ತಿಪರ ಸ್ವಾಸ್ಥ್ಯ, ರಾಷ್ಟ್ರೀಯ ಸ್ವಾಸ್ಥ್ಯ, ಜಾಗತಿಕ ಸ್ವಾಸ್ಥ್ಯ ಹಾಗೂ ಇತ್ಯಾದಿ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ನಡು ನಡುವೆ ಯೋಗ ಪ್ರದರ್ಶನ, ನೃತ್ಯ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಆಸಕ್ತರು ನೋಂದಾವಣೆಗೆ ಮತ್ತು ಹೆಚ್ಚಿನ ವಿವರಕ್ಕೆ 9844576429 ಕರೆ ಮಾಡಬಹುದು ಎಂದು ಹೇಳಿದರು.
ರೋಟರಿ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ಯೋಗದ ರಾಜಧಾನಿ ಎಂಬ ಹೆಗ್ಗಳಿಕೆಯ ಮೈಸೂರಿನಲ್ಲಿ ಯೋಗ ಶೖಂಗಸಮಾವೇಶ ಆಯೋಜನೆ ಮೂಲಕ ಯೋಗ, ಧ್ಯಾನ ಪ್ರವಾಸೋದ್ಯಮಕ್ಕೂ ನೆರವಾಗಲಿದೆ, ಪ್ರಕೖತ್ತಿ ರಮಣೀಯ ಕೊಡಗಿಗೂ ಧ್ಯಾನ, ಯೋಗಾಸಕ್ತರು ಬರುವ ಸಾಧ್ಯತೆಯಿದೆ ಎಂದರಲ್ಲದೇ, ತಲತಲಾಂತರಗಳಿಂದ ಅಷ್ಟಾಂಗ ಯೋಗವನ್ನು ಜಗತ್ತಿಗೆ ಪರಿಚಯಿಸುತ್ತಲೇ ಬಂದಿರುವ ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ರೋಟರಿ ಕೂಡ ಯೋಗ ಮತ್ತು ಧ್ಯಾನದ ಮಹತ್ವ ತಿಳಿಸುವ ಸಮಾವೇಶ ಹಮ್ಮಿಕೊಳ್ಳುವದರೊಂದಿಗೆ ಆರೋಗ್ಯ ಸಂರಕ್ಷಣೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಸಿದ್ದವಾಗಿದೆ ಎಂದರು.
ರೋಟರಿ ವಲಯ ಸಹಾಯಕ ಗವನ೯ರ್ ದೇವಣಿರ ತಿಲಕ್ ಮಾತನಾಡಿ, ರೋಟರಿ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಸದಸ್ಯರು 89 ಕ್ಲಬ್ ಗಳಲ್ಲಿದ್ದು, ಜಗತ್ತಿನಲ್ಲಿ ರೋಟರಿ ಸಂಸ್ಥೆಯು 250 ದೇಶಗಳಲ್ಲಿ 12 ಲಕ್ಷ ಸದಸ್ಯರನ್ನು ಹೊಂದಿದೆ, ಇವರೆಲ್ಲರಿಗೂ ರೋಟರಿ ಇದೀಗ ಮೈಸೂರು ಯೋಗ ಶೃಂಗಸಮಾವೇಶದ ಮೂಲಕ ಯೋಗದ ಜಾಗೃತಿ ಸಾರುತ್ತಿದೆ ಎಂದು ಹಷ೯ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ವಲಯ ಸೇನಾನಿ ಸಂಪತ್ ಕುಮಾರ್, ಮಡಿಕೇರಿ ರೋಟರಿ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ, ರೋಟರಿ ವುಡ್ಸ್ ಅದ್ಯಕ್ಷ ವಸಂತ್ ಕುಮಾರ್ ಉಪಸ್ಥಿರಿದ್ದರು.