ವಿರಾಜಪೇಟೆ, NEWS DESK ನ.28: ಕೇರಳಿಗರು ಹಾಗೂ ಕೊಡಗಿನಲ್ಲಿರುವ ಮಲಯಾಳಿ ಸಮುದಾಯದ ಕುರಿತು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಸಿಪಿಐ(ಎಂ) ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ವಿರಾಜಪೇಟೆಯ ಪಕ್ಷದ ಕಚೇರಿಯಲ್ಲಿ ಖಂಡನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿ ಸದಸ್ಯ ಪಿ.ಆರ್. ಭರತ್, ಕೊಡಗಿನ ಪ್ರತಿಷ್ಠಿತ ಹಾಕಿ ಕ್ರೀಡಾಕೂಟದ ವೇದಿಕೆಯಲ್ಲಿ ಮಲಯಾಳಿಗಳು ಕೊಡಗಿನ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಕ್ರೀಡಾಕೂಟಗಳು ಸೌಹಾರ್ದತೆ, ಸಹೋದರತೆ ಮತ್ತು ಐಕ್ಯತೆಯನ್ನು ಬೆಸೆಯುವ ವೇದಿಕೆಗಳಾಗಿದ್ದು, ಇಂತಹ ಹೇಳಿಕೆಗಳು ಕೊಡಗು ಮತ್ತು ಕೇರಳದ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದರು.
ಕೊಡಗಿನ ಕಾಫಿ ಮತ್ತು ಕರಿಮೆಣಸು ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಕೇರಳದಿಂದ ಆಗಮಿಸಿದ ಮಲಯಾಳಿ ಕಾರ್ಮಿಕರು ಹಾಗೂ ತಮಿಳುನಾಡಿನಿಂದ ಬಂದ ತಮಿಳು ಸಮುದಾಯದವರ ಕೊಡುಗೆ ಅಪಾರವಾಗಿದೆ. ಅವರ ಶ್ರಮವನ್ನು ಮರೆಯಬಾರದು. ಮಲಯಾಳಿಗಳು ಕೊಡಗಿನ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಗೌರವಿಸುತ್ತಿದ್ದು, ಪ್ರತಾಪ್ ಸಿಂಹ ಅವರ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯದರ್ಶಿ ಎಚ್.ಬಿ. ರಮೇಶ್ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ದೇಶದ ಯಾವುದೇ ಭಾಗದಲ್ಲಿ ವಾಸಿಸುವ ಹಾಗೂ ಉದ್ಯೋಗ ಮಾಡುವ ಹಕ್ಕನ್ನು ನೀಡಿದೆ. ಕೊಡಗು ಮತ್ತು ಕೇರಳದ ನಡುವೆ ಅನಾದಿಕಾಲದಿಂದಲೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಬಂಧವಿದೆ. ಆದ್ದರಿಂದ ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ಮುಖಂಡ ಡಾ. ಐ.ಆರ್. ದುರ್ಗಾ ಪ್ರಸಾದ್ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ಸಹಬಾಳ್ವೆಯೇ ಭಾರತದ ಐಕ್ಯತೆಯ ಶಕ್ತಿಯಾಗಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವುದು ಸಹಜ ಪ್ರಕ್ರಿಯೆಯಾಗಿದ್ದು, ಮಲಯಾಳಿಗಳು ಕೊಡಗಿಗೆ ಬಂದಂತೆ ಕನ್ನಡಿಗರೂ ವಿವಿಧ ರಾಜ್ಯಗಳಿಗೆ ತೆರಳಿ ದುಡಿಯುತ್ತಿದ್ದಾರೆ. ಹುತ್ತರಿ ಮತ್ತು ಓಣಂ ಹಬ್ಬಗಳ ಸಾಂಸ್ಕೃತಿಕ ಬೆಸುಗೆ ಸೇರಿದಂತೆ ಕೊಡಗು ಮತ್ತು ಕೇರಳದ ನಡುವಿನ ಐತಿಹಾಸಿಕ ಸಂಬಂಧವನ್ನು ಮರೆಯಬಾರದು ಎಂದರು.
ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಖಂಡಿಸದೆ ಮೌನವಾಗಿರುವುದನ್ನು ಟೀಕಿಸಿದ ಅವರು, ಜನರು ಜನಪರ ವೇದಿಕೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಪದ್ಮಿನಿ ಶ್ರೀಧರ್ ಹಾಗೂ ಎ.ಸಿ. ಸಾಬು ಉಪಸ್ಥಿತರಿದ್ದರು.


































